ತಾಲೂಕು ಮಾದಿಗ ಸಮಾಜದಿಂದ ದಂಡಾಧಿಕಾರಿಗಳಿಗೆ ಧಿಕ್ಕಾರ
ಕಾಳಗಿ.ಎ.6: ರಾಷ್ಟ್ರ ನಾಯಕ, ದೇಶದ ಮಾಜಿ ಉಪಪ್ರಧಾನಿ, ಹಸಿರುಕ್ರಾಂತಿ ಹರಿಕಾರ ಡಾ.ಬಾಬೂ ಜಗಜೀವನರಾಮ್ ಜೀ ಅವರ 117ನೇ ಜಯಂತಿ ಆಚರಣೆ ಮಾಡದೇ ಇಲ್ಲಿಯ ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ ಧೋರಣೆ ಅನುಸರಿಸುವ ಮೂಲಕ ಮಹಾ ನಾಯಕನಿಗೆ ಅಪಮಾನ ಮಾಡಿದ್ದಾರೆ ಎಂದು ತಾಲೂಕು ಮಾದಿಗ ಸಮಾಜದ ಮುಖಂಡರು, ಕಾಳಗಿ ಗ್ರೇಡ್ -1 ತಹಸೀಲ್ದಾರ ಘಮವತಿ ರಾಠೋಡ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ ಹಾಕಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ಗೌರವಾನ್ವಿತ ವ್ಯಕ್ತಿಗಳಾದ ತಾಲೂಕು ದಂಡಾಧಿಕಾರಿಗಳೇ ಮಹಾ ನಾಯಕರ ಜಯಂತಿಯ ಪರಿಜ್ಞಾನವಿಲ್ಲವೆಂದರೆ ‘ಸಂವಿಧಾನ’ದ ಗತಿಯೇನು? ಸಂವಿಧಾನ ರಕ್ಷಣೆ ಮಾಡಿಕೊಟ್ಟಿರುವ ಮಹಾ ನಾಯಕರನ್ನು ಸೌಜನ್ಯಕ್ಕಾದರೂ ಇಲ್ಲಿಯ ತಹಸೀಲ್ದಾರರು, ವಿವಿಧ ಇಲಾಖೆಗಳಿಗೆ ಶುಕ್ರವಾರ ಬಾಬೂಜೀ ಜಯಂತಿ ಆಚರಣೆ ಮಾಡಿಸುವ ಸೂಚನೆಯೂ ಸಹ ನೀಡಲಿಲ್ಲ. ಕೊನೆ ಪಕ್ಷ ತಮ್ಮ ತಹಸೀಲ್ ಕಾರ್ಯಾಲಯಕ್ಕೆ ತಾವು ಬಂದು ಆಚರಣೆ ಮಾಡದಿದ್ದರೂ ಸಹ ಪರವಾಗಿಲ್ಲ. ತಮ್ಮ ಕೆಳ ಅಧಿಕಾರಿಗಳಿಗೂ ಸಹ ಭಾವಚಿತ್ರವಿಟ್ಟು ಪೂಜಿಸಿ ಎನ್ನುವ ಗೋಜಿಗೂ ಸಹ ಹೊಗದಿರುವ ಸನ್ನಿವೇಶ ಕಂಡ ಮಾದಿಗ ಸಮಾಜ ಮುಖಂಡರೂ ಹಾಗೂ ತಾಲೂಕು ಜಯಂತೋತ್ಸವ ಸಮತಿ ಪದಾಧೀಕಾರಿಗಳು ತಾಲೂಕು ಆಡಳಿತ ವಿರುದ್ಧ ಸಿಡಿದೆದ್ದು, ಪ್ರತಿಭಟನೆಗೆ ತಯ್ಯಾರಾಗಿರುವುದರಿಂದ 10-30ಕ್ಕೆ ಕಾರ್ಯಾಲಯಕ್ಕೆ ಆಗಮಿಸಿದ ಸಿಪಾಯಿಗಳಿಬ್ಬರು(ಪಿಯೂನ್) ಗಳು ಬಂದು ಕಾಟಾಚಾರಕ್ಕೆ ಬಾಬೂಜೀ ಭಾವಚಿತ್ರವಿಟ್ಟು ಕೈತೊಳೆದುಕೊಂಡು.
ಸಂವಿಧಾನ ರಕ್ಷಣೆ ಮಾಡಿದ ವ್ಯಕ್ತಿಗಳನ್ನೆ ನಾವು ಒಂದು ಕ್ಷಣ ಸ್ಮರಿಸದಿದ್ದರೆ ಸಂವಿಧಾನವೆಲ್ಲಿ ರಕ್ಷಣೆಯಾಗುತ್ತದೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಕಾಳಗಿ ತಾಲೂಕು ಮಾದಿಗ ಸಮಾಜದ ಹಿರಿಯ ಮುಖಂಡ ರೇವಣಸಿದ್ದ ಕಟ್ಟಿಮನಿ ಹಾಗೂ ತಾಲೂಕು ಜಯಂತೋತ್ಸವ ಸಮತಿ ಅಧ್ಯಕ್ಷ ರವಿ ಸಿಂಗೆ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು.
ತಾಲೂಕು ತಹಸೀಲ್ದಾರ್ ನಿರ್ಲಕ್ಷ್ಯದಿಂದ ತಾಲೂಕಿನ ಇನ್ನುಳಿದ ಇಲಾಖೆಯವರು ಕೂಡಾ ತಮ್ಮ ತಮ್ಮ ಕಾರ್ಯಾಲಯಗಳಲ್ಲಿ ಜಯಂತಿ ಆಚರಣೆಯ ಗೋಜಿಗೆ ಹೋಗಲಿಲ್ಲ.
ಕಾಳಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿ.ಆರ್.ಇ, ಪಟ್ಟಣ ಪಂಚಾಯಿತಿ, ಅಂಗನವಾಡಿ ಕೇಂದ್ರಗಳು, ಹಾಸ್ಟೆಲ್ ಗಳಲ್ಲಿ ಮಾದಿಗ ಸಮಾಜದ ಮುಖಂಡರು ಭೇಟಿಯಾಗಿ ಅಧಿಕಾರಿಗಳಿಗೆ ಕೇಳಿದಾಗ ಮಾತ್ರ ಗಡಿ-ಬಿಡಿಯಿಂದ ಬಾಬೂಜೀ ಭಾವಚಿತ್ರಕ್ಕೆ ಪೂಜಿಸುವುದನ್ನು ನೋಡುಗರಿಗೆ ರೊಚ್ಚಿಗೆಬ್ಬಿಸುವಂತೆ ಮಾಡಿತು.
ಕಾಳಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ರಾಮೇಶ್ವರ ಶಾಖಾಪೂರ ಅವರಂತೂ ತಮ್ಮ ದೂರವಾಣಿ ಸಂಪರ್ಕವನ್ನೇ ಸ್ಥಗಿತಗೊಳಿಸಿಕೊಂಡು ಜಯಂತಿಗೂ ತಮಗೂ ಸಂಬಂಧವಿಲ್ಲವೆಂದು ಕುಳಿತಿರುವುದರಿಂದ ಸಮಾಜ ಮುಖಂಡರು ಅಲ್ಲಿಯ ಸೀಪಾಯಿಗಳಿಗೆ ಕೇಳಿದರೆ ನಮಗೇನು ಗೊತ್ತಿಲ್ಲವೆಂದು ಹೇಳಿರುವುದರಿಂದ ಮಾದಿಗ ಸಮಾಜದ ಮುಖಂಡರು ಸೇರಿಕೊಂಡು ತಾವೇ ಬಾಬೂಜೀ ಅವರ ಬೃಹದಾಕಾರದ ಭಾವಚಿತ್ರ ತಂದು, ಸುಂದರವಾದ ಹೂವಿನ ಹಾರವನ್ನು ಹಾಕಿ, ಕಾಯಿ-ಕರ್ಪೂರ ಬೆಳಗಿ, ಪುಷ್ಪ ನಮನ ಗೈದು ಅಧಿಕಾರಿಗಳು ಇಲ್ಲದಿದ್ದರೂ ಸಹ ತಾವೇ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಅರ್ಥ ಪೂರ್ಣವಾಗಿ ಬಾಬೂಜೀ ಜಯಂತಿ ಆಚರಣೆ ಮಾಡಿದರು. ಮಾದಿಗ ಸಮಾಜದ ಹಿರಿಯ ಮುಖಂಡ ರೇವಣಸಿದ್ದ ಕಟ್ಟಿಮನಿ, ಕಾಳಗಿ ತಾಲೂಕು ಜಯಂತೋತ್ಸವ ಸಮತಿ ಅಧ್ಯಕ್ಷ ರವಿ ಸಿಂಗೆ, ಸುಂದರ ಡಿ.ಸಾಗರ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ ಕಾಳಗಿ, ಗ್ರಾಪಂ. ಸದಸ್ಯ ಶರಣು ರಾಜಾಪುರ, ಮಹೇಶ್ ಭರತನೂರ, ರೇವಣಸಿದ್ದ ಕೊಡ್ಲಿ, ಮಲ್ಲಿಕಾರ್ಜುನ ಸಿಂಗೆ, ಹಣಮಂತ ಮಂಗಲಗಿ, ಕರಣ ರಾಜಾಪುರ, ಮಹೇಶ್ ತಾಡಪಳ್ಳಿ, ಅನೀಲ, ಮಾರುತಿ ಕೊಡ್ಲಿ, ಸಂಜು ಮೋಘಾ ಕಾಳಗಿ, ಕೃಷ್ಣ ಕಟ್ಟಿಮನಿ, ಅಶೋಕ ಸಿಂಗೆ, ಚಂದ್ರಶೇಖರ ಮಳಗಿ, ಅನೀಲ ದೊಡ್ಮನಿ, ಬಲರಾಮ ವಲ್ಲ್ಯಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾಳಗಿ ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ಆಡಳಿತ ಕಛೇರಿಯಲ್ಲಿಯೇ ಅನೈತಿಕ ಚಟುವಟಿಕೆಗಳು ನಡೆದರೂ ಯಾರೂ ಕೇಳುವವರೇ ಇಲ್ಲದಂತಾಗಿದೆ.
ಗ್ರೇಡ್ -1ತಹಸೀಲ್ದಾರ ಘಮವತಿ ರಾಠೋಡ ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ತಾಲೂಕಿನ ವಿವಿಧ ಇಲಾಖೆಗಳಲ್ಲಿ ನಡೆಯಬೆಕಾಗಿರುವ ಬಾಬೂಜೀ ಜಯಂತಿ ನಡೆಯದಂತಾಗಿದೆ.
ಜಿಲ್ಲಾಧಿಕಾರಿಗಳು ತಹಸೀಲ್ದಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಳಗಿ ತಾಲೂಕು ಮಾದಿಗ ಸಮಾಜದ ಹಿರಿಯ ಮುಖಂಡ ರೇವಣಸಿದ್ದ ಕಟ್ಟಿಮನಿ ಆಗ್ರಹಿಸಿದ್ದಾರೆ.
ಹಣವಿಲ್ಲದೆ ಕೆಲಸಗಳಾಗದಿರುವ ಈ ಕಛೇರಿಯಲ್ಲಿ ಬಾಬೂಜೀ ಜಯಂತಿ ಆಚರಣೆ ಎಲ್ಲಿಂದ ಕಾಣಬೇಕು. ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.