ಪ್ರತಿಯೊಬ್ಬರ ಜೀವನದಲ್ಲಿ ಸಾಧನೆಗಾಗಿ ಗುರಿ ಮತ್ತು ಗುರು ಬಹಳ ಮುಖ್ಯ : ಮರಳುಸಿದ್ಧ ಸ್ವಾಮೀಜಿ
ಅಥಣಿ:ಏ.6: ಪ್ರತಿಯೊಬ್ಬರ ಜೀವನದಲ್ಲಿ ಒಂದು ಉನ್ನತವಾದ ಗುರಿಯನ್ನು ಹೊಂದಿರಬೇಕು. ಆ ಗುರಿ ಸಾಧನೆಗಾಗಿ ಗುರುವಿನ ಮಾರ್ಗದರ್ಶನ ಬಹಳ ಮುಖ್ಯ. ಗುರುಗಳು ಹೇಳುವ ವಿದ್ಯೆಯನ್ನ ಶ್ರದ್ದೆ ಮತ್ತು ಭಕ್ತಿಯಿಂದ ಕಲಿತಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಶೆಟ್ಟರ ಮಠದ ಮರಳುಸಿದ್ಧ ಸ್ವಾಮೀಜಿ ಹೇಳಿದರು.
ಅವರು ಸುಕ್ಷೇತ್ರ ಶೆಟ್ಟರ ಮಠದಲ್ಲಿ ಅಥಣಿ ತಾಲೂಕ ಜಂಗಮ ಅಭಿವೃದ್ಧಿ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಸಂಸ್ಕಾರ ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವ್ಯಾಪಾರಿಕರಣವಾಗಿದೆ. ಇದರಿಂದ ಮೊದಲಿನ ಗುರು ಶಿಷ್ಯ ಪರಂಪರೆ ಮಹತ್ವ ಕಡಿಮೆಯಾಗುತ್ತಿದೆ. ಗುರುಗಳು ತಮ್ಮ ಸ್ಥಾನದ ಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಿಷ್ಯರಿಗೆ ಬೋಧನೆ ಮಾಡಬೇಕು. ಶಿಷ್ಯರು ಕೂಡ ಗುರುವಿನ ಆಜ್ಞೆಯನ್ನು ಪಾಲಿಸುವ ಮೂಲಕ ಶ್ರದ್ದೆ ಮತ್ತು ಭಕ್ತಿಯಿಂದ ಜ್ಞಾನವನ್ನು ಸಂಪಾದಿಸಬೇಕು. ಪಾಲಕರು ಕೂಡ ಮಕ್ಕಳಿಗೆ ಬರಿ ಅಂಕಗಳಿಸುವ ಶಿಕ್ಷಣ ನೀಡಿದರೆ ಸಾಲದು ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ವೇದಮೂರ್ತಿ ಸಂಜಯ ಹಿರೇಮಠ ಮಾತನಾಡಿ ನಮ್ಮ ಮಕ್ಕಳು ಇಂದು ಪಾಶ್ಚಿಮಾತ್ಯ ಸಂಸ್ಕøತಿಗೆ ಒಳಗಾಗಿ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮರೆಯುತಿದ್ದಾರೆ. ಇದು ಆರೋಗ್ಯ ಬೆಳವಣಿಗೆ ಅಲ್ಲ. ಅದಕ್ಕಾಗಿ ನಾವು ಇಂಥ ಶಿಭಿರಗಳಲ್ಲಿ ಭಾಗವಹಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸಬೇಕು. ನಾವು ಜಗತ್ತಿನಲ್ಲಿ ಎಷ್ಟೇ ಉನ್ನತ ಸ್ಥಾನದಲ್ಲಿ ಇದ್ದರು ಗುರು ಲಿಂಗ ಜಂಗಮ ಪ್ರೇಮಿಗಳಾಗಿ ಅದರ ಆರಾಧಕರಾಗಬೇಕು ಎಂದು ಹೇಳಿದರು.
ಜಂಗಮ ಅಭಿವೃದ್ದಿ ಸಂಘದ ಅಧ್ಯಕ್ಷ ಈರಯ್ಯ ಜಗದಾಳಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ, ಶಿವು ಅಳ್ಳಿಮಟ್ಟಿ, ಮುರುಘೇಶ ಅಳ್ಳಿಮಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.