ಏ.8 ರಿಂದ 12 ರ ವರೆಗೆ ಕತಕನಹಳ್ಳಿ ಸದಾಶಿವ ಜಾತ್ರಾ ಮಹೋತ್ಸವ
ವಿಜಯಪುರ,ಏ.6: ತಾಲೂಕಿನ ಕತಕನಹಳ್ಳಿಯಲ್ಲಿ ಏ.8 ರಿಂದ 12 ರವರೆಗೆ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಕತಕನಹಳ್ಳಿ ಸದಾಶಿವ ಮಠದ ಪೀಠಾಧಿಪತಿ ಶಿವಯ್ಯ ಮಹಾಸ್ವಾಮಿಗಳು ತಿಳಿಸಿದರು.
ಶುಕ್ರವಾರ ಕತಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಠದ ಪರಂಪರೆಯನ್ನು ಸಾರುವ ಗುರುಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ಧರಾಮೇಶ್ವರ ಲೀಲಾಮೃತ ಗ್ರಂಥ ಲೋಕಾರ್ಪಣೆಯಾಗಲಿದೆ. ಹಾಗಾಗಿ ಇದೊಂದು ಅತ್ಯಂತ ವಿಶೇಷವಾದ ಯಾತ್ರೆಯಾಗಿ ಭಕ್ತರ ಮನದಲ್ಲಿ ಉಳಿಯಲಿದೆ ಎಂದರು.
ಜಾತ್ರೆ ನಿಮಿತ್ತ ಸಾಮೂಹಿಕ ವಿವಾಹ, ಪುರಾಣ ಪ್ರವಚನ, ಕುಸ್ತಿ, ಭಾರ ಎತ್ತುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳು 5 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿವೆ. ಪ್ರತಿ ವರ್ಷದಂತೆ ಮಠದ ಯಾತ್ರೆಯಲ್ಲಿ ಅಖಂಡ ದಾಸೋಹ ಇರಲಿದ್ದು, ಭಕ್ತರು ತಾವೇ ಮಾಡಿ, ಇತರರಿಗೂ ಉಣಬಡಿಸಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಏ.8 ರಂದು ಬೆಳಗ್ಗೆ ಜಾನುವಾರು ಜಾತ್ರೆಯನ್ನು ಶಿವಯ್ಯ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಕೃಷಿ ಮೇಳ, ಮಧ್ಯಾಹ್ನ 4 ಗಂಟೆಗೆ ಕೆಸರಿನಲ್ಲಿ ಮನುಷ್ಯರ ಓಟ, ಸಂಜೆ 7 ಗಂಟೆಗೆ ಜ್ಞಾನ ದೀಪೋತ್ಸವ ನಡೆಯಲಿದೆ. ಏ.9 ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭೀಷೇಕ ಹಾಗೂ ಸಕಲ ವಾಧ್ಯಗಳೊಂದಿಗೆ ಕುಂಭಾಭೀಷೇಕ, ಸಂಜೆ 7 ಗಂಟೆಗೆ ಶ್ರೀಶೈಲ ಹಿರೇಮಠ ಅವರಿಂದ ಬಬಲಾದಿ ಮಹಾತ್ಮರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ ವಿಶೇಷವಾಗಿ ಗ್ರಂಥ ಮೆರವಣಿಗೆ ವೇಳೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದರು.
ಮಧುವನ ಹೋಟೆಲ್ ಮಾಲೀಕ ಬಾಬುಗೌಡ ಬಿರಾದಾರ ಮಾತನಾಡಿ, ಬಬಲಾದಿ ಸದಾಶಿವ ಮಠಕ್ಕೂ ಹಾಗೂ ಕತಕನಹಳ್ಳಿ ಮಠಕ್ಕೂ ಇರುವ ಸಂಬಂಧವನ್ನು ಗ್ರಂಥ ರೂಪದಲ್ಲಿ ಹೊರತರಲಾಗುತ್ತಿದೆ. 12 ವರ್ಷಗಳಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದೇವು, ಮಿರಜ್, ಪುಣೆ ಸೇರಿದಂತೆ ವಿವಿಧೆಡೆ ದಾಖಲೆಗಳನ್ನು ಹುಡುಕಿದೆವು. ಇತಿಹಾಸ ತಜ್ಞರಿಂದ ಮಾಹಿತಿ ತೆಗೆದುಕೊಂಡು ವಿಜಯಪುರದಲ್ಲಿಯೇ ದಾಖಲೆ ಹುಡುಕಿ ಸದ್ಯ ಗ್ರಂಥರೂಪದಲ್ಲಿ ಹೊರತರಲಾಗುತ್ತಿದೆ ಎಂದರು.
ವಿಜಯಪುರದ ಉದ್ಯಮಿ ರಾಜು ಗುಡ್ಡೊಡಗಿ ಮಾತನಾಡಿದರು.
ಗ್ರಂಥ ಕರ್ತೃ ವೇದÀ ಮೂರ್ತಿ ಶ್ರೀಶೈಲ ಸ್ವಾಮಿಜಿ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.