ಮೇತ್ರಿಯವರ ಸುಳ್ಳುಜಾತಿ ಪ್ರಮಾಣ ಪತ್ರ ತನಿಖೆಗೆ ದಲಿತ ಹಕ್ಕುಗಳ ಸಮಿತಿ ಒತ್ತಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೆ.ಎಂ. ಮೇತ್ರಿ ಇವರು ಪರಿಶಿಷ್ಟ ಪಂಗಡ (ಎಸ್.ಟಿ.) ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತು ಸಮಗ್ರ ತನಿಖೆಗೆ ದಲಿತ ಹಕ್ಕುಗಳ ಸಮಿತಿ ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿದೆ‌
ಪ್ರೊ.ರಾಮಣ್ಣ ಬಿನ್ ಮಾರುತೆಪ್ಪ ಮೇತ್ರಿ ಇವರು ಮೂಲತಃ ಹಿಂದೂ ಧನಗರ ಜಾತಿಗೆ ಸೇರಿದ್ದರೂ ಸಹ ಪರಿಶಿಷ್ಟ ಪಂಗಡದ ‘ಗೊಂಡ’ ಜಾತಿಯ ಸುಳ್ಳು ಪ್ರಮಾಣ ಪತ್ರವನ್ನು ಪಡೆದು.  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಪ್ರವಾಚಕ ಹುದ್ದೆಗೆ ನೇಮಕಾತಿ ಹೊಂದಿದ್ದಾರೆ ಎಂದು ದೂರು ದಾಖಲಾಗಿರುತ್ತದೆ.
ಇದೇ ಪರಿಶಿಷ್ಟ ಪಂಗಡ ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಭಡ್ತಿ ಮತ್ತು ಅನೇಕ ಸೌಲಭ್ಯಗಳನ್ನು ಪಡೆದು ರಾಜ್ಯ ಸರ್ಕಾರಕ್ಕೆ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು  ತಿಳಿದು ಬರುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಹೈಕೋರ್ಟ್ ನೀಡಿದ ಕುಲಪತಿಗಳ ನೇಮಕಕ್ಕೆ ನೀಡಿದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದ ಮೇತ್ರಿ ಅವರನ್ನು ಸಧ್ಯ ಕುಲಪತಿ ಹುದ್ದೆಯಿಂದ ಅಮಾನತ್ತಿನಲ್ಲಿಡಲಾಗಿದೆ.
ಮೇತ್ರಿ ಅವರ ಸುಳ್ಳು ಜಾತಿ ಪ್ರಮಾಣ ಪತ್ರದ ಬಗ್ಗೆ ಸಮಗ್ರ ತನಿಖೆ ಆಗಬೇಕು.  ಅಲ್ಲದೇ ಈ ಬಗ್ಗೆ ವಿಳಂಬಕ್ಕೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಆರೋಪಗಳು ನಿಜವೆಂದು ಸಾಬೀತಾದಲ್ಲಿ ಪರಿಶಿಷ್ಟ ಪಂಗಡದ ಹೆಸರಿಲ್ಲದೆ ಪಡೆದಿರುವ ಎಲ್ಲಾ ಆರ್ಥಿಕ  ಸಂಪನ್ಮೂಲಗಳನ್ನು ವಾಪಸ್ ಪಡೆದು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಂಘಟನೆಯ ಜೆ.ಸತ್ಯಬಾಬು, ಶಿವಶಂಕರ್ ಮೊದಲಾದವರು ಇಂದು ರಾಜ್ಯಪಾಲರಿಗೆ ಬರೆದ ಮನವಿನಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಒತ್ತಾಯಿಸಿದ್ದಾರೆ.