ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸಲು ಬೇಸಿಗೆ ಶಿಬಿರ ಪೂರಕ
ಕಲಬುರಗಿ:ಏ.6: ಬೇಸಿಗೆ ದಿವಸಗಳಲ್ಲಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಸುತ್ತಾಡಿ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಮಕ್ಕಳು ಮೋಬೈಲ್, ಟಿ.ವಿ. ವೀಕ್ಷಣೆಯಲ್ಲಿಯೇ ಸಮಯ ವ್ಯರ್ಥಮಾಡುವುದು ಬೇಡ. ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಮೂಲಕ ನಿಮ್ಮ ತರಗತಿಯ ಪಠ್ಯ ಮತ್ತು ಪಠ್ಯೇತರ, ಸೃಜನಶೀಲ ಚಟುವಟಿಕೆಗಳ ಮೂಲಕ ವಿಷಯದ ಜ್ಞಾನ, ಸಮಯದ ಸದುಪಯೋಗಕ್ಕೆ ಬೇಸಿಗೆ ಶಿಬಿರಗಳು ಪೂರಕವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ಸೆಂಟರ್’ನ ಬೇಸಿಗೆ ವಿಶೇಷ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ವಿವೇಕಾನಂದ ಕೋಚಿಂಗ ಸೆಂಟರ್‍ನ ಮುಖ್ಯಸ್ಥ ಬಸವರಾಜ ಮಳ್ಳಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು, ಅತ್ಯಂತ ಕಡಿಮೆ ಶುಲ್ಕದಲ್ಲಿಯೇ ಬೇಸಿಗೆ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 2 ತಿಂಗಳುಗಳ ಕಾಲ ಪಠ್ಯ ಮತ್ತು ಪಠ್ಯೇತರ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸೂಕ್ತ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಶಿಬಿರ, ಕರಿಯರ್ ಗೈಡೆನ್ಸ್ ಬಗ್ಗೆ ತಿಳಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನೆಯನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್, ಸೆಂಟರ್‍ನ ಶಿಕ್ಷಕರಾದ ಭಾಗ್ಯಶ್ರೀ ಕಲ್ಲೂರ್, ವಿಜಯಲಕ್ಷ್ಮೀ ನಾಲವಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.