ಕಾರ್ಮಿಕರ ನಡುವೆ ಎಸ್.ಯು.ಸಿ.ಐ ಅಭ್ಯರ್ಥಿ ಮತಯಾಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ:, ಏ.06 ನಗರದ ಸುಧಾ ಕ್ರಾಸ್ ಬಳಿಯ ಉದ್ಯಾನವನ ವೊಂದರಲ್ಲಿ  ವಿವಿಧ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಕಾರ್ಮಿಕ ವರ್ಗದ ನೈಜ ಪಕ್ಷವಾದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷಕ್ಕೆ ಮತ ನೀಡುವಂತೆ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಎ.ದೇವದಾಸ್ ಮನವಿ ಮಾಡಿದರು.
 ” ಬಿಜೆಪಿ, ಕಾಂಗ್ರೆಸ್ ಸರ್ಕಾರಗಳ  ಬಂಡವಾಳಶಾಹಿ ಪರ ನೀತಿಗಳ ಫಲವಾಗಿ ಕಾರ್ಮಿಕರ ಬದುಕು ದುರ್ಭರವಾಗಿದೆ. ಗುತ್ತಿಗೆ ಹೊರಗುತ್ತಿಗೆ ಪದ್ಧತಿಯಿಂದ ಕಾರ್ಮಿಕರ ಬದುಕು ಅಭದ್ರತೆಯಿಂದ ಕೂಡಿದೆ. ಖಾಯಂ ಉದ್ಯೋಗಗಳು ಮಾಯವಾಗಿವೆ.  ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನ  ಅತ್ಯಂತ ಕನಿಷ್ಠ ವಾಗಿದ್ದು, ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ, ಇದು ಯಾವುದಕ್ಕೂ ಸಾಲುವುದಿಲ್ಲ. ಈ ಪರಿಸ್ಥಿಯಲ್ಲಿ ಮೋದಿ ಸರ್ಕಾರದ  ಕಾರ್ಮಿಕ ಸಂಹಿತೆಗಳು ಜಾರಿಯಾಗಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಕಾರ್ಮಿಕರು ತಮ್ಮ ಎಲ್ಲಾ ನ್ಯಾಯ ಬದ್ದ ಹಕ್ಕುಗಳಿಂದ ವಂಚಿತರಾಗುತ್ತಾರೆ . ಅಲ್ಲದೆ ಈ ಕಾರ್ಮಿಕ ಸಂಹಿತೆಗಳು, ಕಾರ್ಪೋರೇಟ್ ಮಾಲೀಕರಿಗೆ ಕಾರ್ಮಿಕರನ್ನು ಮತ್ತಷ್ಟು  ಕ್ರೂರವಾಗಿ ಶೋಷಿಸಲು ಅಸ್ತ್ರ ನೀಡುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಎಡ ಪಕ್ಷಗಳು ಒಂದಾಗಿ ತೀವ್ರವಾದ ಹೋರಾಟ ಬೆಳೆಸುವ, ಒಟ್ಟಾಗಿ ಚುನಾವಣೆ ಎದುರಿಸುವ ಜರೂರು ಅವಶ್ಯಕತೆಯಿತ್ತು. ದುರುತವೆಂದರೆ ಸಿಪಿಐ, ಸಿಪಿಎಂ ನಂತಹ  ಪಕ್ಷಗಳು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವನ್ನು ಸೇರಿವೆ. ಈ ಹಿನ್ನೆಲೆಯಲ್ಲಿ ಎಸ್.ಯು.ಸಿ.ಐ(ಸಿ)  ಪಕ್ಷವು ಕಾರ್ಮಿಕ ವರ್ಗದ ಹೋರಾಟಗಳನ್ನು ದೇಶಾದ್ಯಂತ ನಿರಂತರವಾಗಿ ಸಂಘಟಿಸುತ್ತಾ, ಲೋಕಸಭಾ ಚುನಾವಣೆಯಲ್ಲಿ ಧುಮುಕಿದೆ. ಕಾರ್ಮಿಕರು ತಮ್ಮ ವಿರೋಧಿಗಳಾದ ಬಂಡವಾಳಶಾಹಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಿಜವಾದ ಬಣ್ಣ ಏನೆಂಬುದನ್ನು ಅರಿತು ನೀಡಬೇಕಾಗಿ ಮನವಿ  ಮಾಡಿದರು. ಪಕ್ಷದ ಜಿಲ್ಲಾ ಮುಖಂಡರಾದ ಡಾ.ಪ್ರಮೋದ್, ಎ.ಶಾಂತಾ, ಸುರೇಶ್.ಜಿ ಮತ್ತಿತರರು ಉಪಸ್ಥಿತರಿದ್ದರು.