ದೇಶದ ಸ್ವಾತಂತ್ರ್ಯದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಮುಖ
ಕಲಬುರಗಿ:ಏ.6: ದೇಶದ ಸ್ವಾತಂತ್ರ ಚಳುವಳಿ ಇತಿಹಾಸದಲ್ಲಿ ಮುಖ್ಯವಾಗಿದೆ. ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಆಡಳಿತ ಕಾಲದಲ್ಲಿ ಉಪ್ಪಿನ ಮೇಲೆ ವಿಧಿಸಿ ತೆರಿಗೆಯನ್ನು ವಿರೋಧಿಸಿ ತಮ್ಮ ಅನುಯಾಯಿಗಳೊಡನೆ ಸಾಬರಮತಿ ಆಶ್ರಮದಿಂದ ಸಮುದ್ರ ದಡದಲ್ಲಿರುವ ದಂಡಿಯವರೆಗಿನ 240 ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ 1930ರ ಎಪ್ರಿಲ್ 6ರಂದು ಉಪ್ಪನ್ನು ತಯಾರಿಸಿ, ಬ್ರಿಟಿಷರಿಗೆ ಬಿಸಿ ಮುಟ್ಟಿಸುವ ಮೂಲಕ ದೇಶದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ಸೆಂಟರ್’ನಲ್ಲಿ ಶನಿವಾರ ಜರುಗಿದ ‘ಉಪ್ಪಿನ ಸತ್ಯಾಗ್ರಹ ದಿನಾಚರಣೆ’ ಕಾರ್ಯಕ್ರಮವನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಸಮುದ್ರ ದಡದಲ್ಲಿರುವ ನಾಗರಿಕರಿಗೆ ಉಪ್ಪು ಉಚಿತವಾಗಿ ದೊರೆಯುತ್ತಿದ್ದರೂ ಕೂಡಾ ಅದನ್ನು ಸರ್ಕಾರದಿಂದ ಖರೀದಿಸುವಂತೆ ಮಾಡಲಾಗಿತ್ತು. ಇದರಿಂದ ಬಡವರು, ಜನಸಾಮಾನ್ಯರಿಗೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದನ್ನು ಗಮನಿಸಿದ ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ(ದಂಡಿಯಾತ್ರೆ)ಯನ್ನು ಮಾಡುವ ಮೂಲಕ ಅವರಿಗೆ ನ್ಯಾಯವನ್ನು ಒದಗಿಸಿಕೊಟ್ಟರು. ಇದು ಸ್ವಾತಂತ್ರ್ಯ ಚಳುವಳಿಗೆ ಪ್ರಖರತೆಯ ಹೆಚ್ಚಳಕ್ಕೆ ಕಾರಣವಾಯಿತು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ಕೋಚಿಂಗ ಸೆಂಟರ್‍ನ ಮುಖ್ಯಸ್ಥ ಬಸವರಾಜ ಮಳ್ಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕೋಚಿಂಗ್ ಸೆಂಟರ್‍ನ ಶಿಕ್ಷಕರಾದ ಭಾಗ್ಯಶ್ರೀ ಕಲ್ಲೂರ್, ವಿಜಯಲಕ್ಷ್ಮೀ ನಾಲವಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.