ಸರಳವಾಗಿ ವಿವಾಹವಾಗುವವರು ಆದರ್ಶ ಜೀವನ ಸಾಗಿಸಲು ಸಾಧ್ಯ

ಸಂಜೆವಾಣಿ ವಾರ್ತೆ
ಚಿತ್ರದುರ್ಗ ಏ. 6 – ಸಂಸಾರವೆAಬ ನದಿಯಲ್ಲಿ ಪ್ರೀತಿ ಬತ್ತಿ ಹೋಗಬಾರದು. ಸತಿ ಪತಿಗಳ ದೃಷ್ಟಿ ಒಂದೇ ಆಗಿರಬೇಕು. ಕಿವಿಗಳು ಎರಡರಿದ್ದರೂ ಶಬ್ದ ಒಂದೇ ಕೇಳಿಸುವಂತೆ ಸತಿಪತಿಗಳ ಮನಸ್ಥಿತಿಗಳ ಒಂದೇ ಇರಬೇಕಾಗುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಮೂವತ್ನಾಲ್ಕನೆ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಸಂಸಾರದ ಜಗಳ ಅದು ಪ್ರೀತಿಯ ಜಗಳವಿರಬೇಕು. ಅಲ್ಲಿ ದ್ವೇಷ ಅಸೂಯೆ ಇರಬಾರದು. ಅವರಲ್ಲಿ ಸಾಮರಸ್ಯದ ಕೀಲು ಇರಬೇಕು. ಗಂಡನಿಗೆ ಚಟ ಹಾಗು ಹೆಂಡತಿಗೆ ಹಠ ಇರಬಾರದು. ದುಶ್ಚಟಗಳಿಗೆ ದಾಸರಾಗಬೇಡಿ. ಏನೆ ಕಷ್ಟ ಬಂದರೂ ಎದುರಿಸಿ ಜೀವನ ಸಾಗಿಸಬೇಕು ಎಂದರು.ಕೋಟಿ ಕೋಟಿ ಖರ್ಚು ಮಾಡಿ ಮದುವೆ ಆದವರ ಆದರ್ಶರಾಗುವುದಿಲ್ಲ. ಸರಳವಾಗಿ ವಿವಾಹವಾಗುವವರು ಆದರ್ಶ ಜೀವನ ಸಾಗಿಸಲು ಸಾಧ್ಯ. ಶ್ರೀಮಠವು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾವೈಕ್ಷತೆ ಕಾಣಲು ಸಾಧ್ಯ. ಎಲ್ಲರೂ ತಪ್ಪದೇ ಮತದಾನ ಮಾಡಿರಿ ಎಂದು ತಿಳಿಸಿದರು.ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಶ್ರೀಮಠದಲ್ಲಿ ನಡೆಯುವ ಕಲ್ಯಾಣ ಮಹೋತ್ಸವ ಐತಿಹಾಸಿಕವಾದದ್ದು. ಇಲ್ಲಿ ಸಾವಿರಾರು ಮದುವೆಗಳು ನಡೆದಿರುವುದೇ ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಮುಖ್ಯಅತಿಥಿ ನಿವೃತ್ತ ತಹಶೀಲ್ದಾರ್ ಗಿರಿಯಪ್ಪ ಮಾತನಾಡಿ, ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ. ನಾವು ಎಂಬ ಭಾವನೆ ಬೇರೂರಿರುತ್ತದೆ. ಇದೊಂದು ಸುಸಂದರ್ಭ ಎಂದರು.ಕಾರ್ಯಕ್ರಮದಲ್ಲಿ 21 ಜೋಡಿಗಳ ವಿವಾಹ ನೆರವೇರಿಸಲಾಯಿತು.ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು