ಕಾಲೇಜುಗಳಲ್ಲಿ ಮತಬೇಟೆಯಾಡಿದ ಯದುವೀರ್ ಒಡೆಯರ್
ಸಂಜೆವಾಣಿ ನ್ಯೂಸ್
ಮೈಸೂರು: ಏ.06:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಮತಬೇಟೆ ನಡೆಸಿದರು.
ಬಾಬುಜಗಜೀವನ್ ರಾಂ ಜಯಂತಿ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಮುಂಭಾಗವಿರುವ ಬಾಬೂಜೀ ಪ್ರತಿಮೆಗೆ ಮಾಲಾರ್ಪನೆ ಮಾಡಿ ಪ್ರಚಾರ ಆರಂಭಿಸಿದರು. ಯುವ ಮತದಾರರ ಮೇಲೆ ಕಣ್ಣಿಟ್ಟಿರುವ ಅವರು, ವಿವಿಧ ಕಾಲೇಜುಗಳಿಗೆ ತೆರಳಿ ಮತಯಾಚಿಸಿದರು. ಮೊದಲಿಗೆ ಕೇನ್ಸ್ ಟೆಕ್ನಾಲಜಿಗೆ ತೆರಳಿದ ಯದವೀರ್ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ಸೇಪಿಯಂಟ್ ಕಾಲೇಜು, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು, ಮಹಾಜನ ಕಾಲೇಜು, ಜಿಎಎಸ್‍ಎಸ್ ಕಾಲೇಜಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಅವರೊಂದಿಗೆ ಸೆಲ್ಪೀ ಕ್ಲಿಕ್ಕಿಸಿಕೊಂಡರು.
ಮೋದಿಯಿಂದ ಭಾರತ ಸುವರ್ಣ ಯುಗ: ಮಹಾರಾಜ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದಾಶಿಸಿ ಮಾತನಾಡಿದ ಯದುವೀರ್, ಅಂದಿನ ಮೈಸೂರು ಅರಸರು ಮಾಡಿದ ಕೆಲಸಗಳನ್ನು ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ಸುವರ್ಣ ಯುಗ ಮಾಡುತ್ತಿದ್ದಾರೆ ಎಂದರು.
ಮೈಸೂರು ಅರಸರು ಬ್ರ್ಯಾಂಡ್ ಮೈಸೂರು ಸೃಷ್ಟಿಸಿದರು. ಮೈಸೂರು ಸಿಲ್ಕ್, ಸ್ಯಾಂಡಲ್, ಸಿಮೆಂಟ್, ಸ್ಟೀಲ್, ಅಗರಬತ್ತಿ, ಶುಗರ್ ಕಾರ್ಖಾನೆ ಸೇರಿ ನಾನಾ ಸಂಸ್ಥೆಗಳನ್ನು ಸ್ಥಾಪಿಸಿದರು. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಅಂದಿನ ಅರಸರು ಸಮಾಜದ ಪರಿಸ್ಥಿತಿ ಸುಧಾರಿಸಲು ಬಹಳಷ್ಟು ಕೆಲಸ ಮಾಡಿದರು. ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಮಹಿಳೆಯರ ಸಬಲೀಕರಣಕ್ಕೆ ಆದ್ಯತೆಯ ಜತೆಗೆ ಮತ ಚಲಾಯಿಸುವ ಹಕ್ಕು ಕೊಟ್ಟರು. ಅದರಂತೆಯೇ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಶೇ.50 ಮೀಸಲು ಜಾರಿ ಮಾಡಿದ್ದಾರೆ ಎಂದರು.
ಪ್ರಧಾನ ಮಂತ್ರಿ ಭಾರತದ ಪ್ರಾಚೀನ ಪರಂಪರೆ ರಕ್ಷಣೆ ಜತೆಗೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಅರಮನೆ ಮುಂದೆ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವಮಟ್ಟಕ್ಕೆ ಪರಿಚಯಿಸಿದ್ದಾರೆ. ಮೈಸೂರು ಬೆಂಗಳೂರು ಹೆದ್ದಾರಿ ಸೇರಿ ಬಹಳಷ್ಟು ಅನುಕೂಲ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಸೂಕ್ತವಾದ ಅಭರ್Àರ್ಥಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬುವಂತೆ ವಿದ್ಯಾರ್ಥಿಗಳನ್ನು ಕೋರಿದ ಯದುವೀರ್ ಅವರು, ಜನಪ್ರತಿನಿಧಿಯಾಗುವ ಮುನ್ನ ನಿಮ್ಮ ಪ್ರತಿನಿಧಿಯಾಗಿರುವೆ ಎಂದು ಹೇಳಿದರು.