ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಮಹೋತ್ಸವಕ್ಕೆ ಸಿದ್ಧತೆ
ಸಂಜೆವಾಣಿ ವಾರ್ತೆ
ಹನೂರು.ಏ.6 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗುವ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು ದಿನಾಂಕ 09-04-2024, ಮಂಗಳವಾರದಂದು ಚಂದ್ರಮಾನ ಯುಗಾದಿ ಮಹಾರಥೋತ್ಸವ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಲಿದೆ.
ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಪವಾಡ ಪುರುಷ ನೆಲೆಸಿರು ಮಲೆ ಮಾದಪ್ಪ ಸ್ವಾಮಿ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವವು. ಏಪ್ರಿಲ್ 06 ರಿಂದ 09 ರ ವರೆಗೆ ನಡೆಯಲಿದ್ದು ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ರಘು ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಯುಗಾದಿ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಈಗಾಗಲೇ ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದು ಶುಕ್ರವಾರ ಸಂಜೆ ಕಾಲ್ನಡಿಗೆಯಲ್ಲಿ ಬಂದ ಭಕ್ತಾದಿಗಳು ರಂಗಮಂದಿರದ ಆವರಣ ಹಾಗೂ ಅಕ್ಕಪಕ್ಕದಲ್ಲಿ ನೆರಳಿಗಾಗಿ ವ್ಯವಸ್ಥೆಯನ್ನು ಕಲ್ಪಿಸಿರುವ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದಾರೆ.
ಕರ್ನಾಟಕ ರಾಜ್ಯವಲ್ಲದೇ ನೆರೆ ರಾಜ್ಯವಾದ ತಮಿಳುನಾಡಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಬರುತ್ತಿದ್ದಾರೆ. ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಬಹುಪಾಲು ನೆರೆ ರಾಜ್ಯದ ತಮಿಳುನಾಡಿನ ಭಕ್ತಾದಿಗಳೇ ಹೆಚ್ಚಾಗಿ ಕಂಡುಬರುತ್ತಾರೆ.
ಶನಿವಾರದಿಂದ ಮಂಗಳವಾರದವರೆಗೆ ನಡೆಯುವ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಯುಗಾದಿ ಜಾತ್ರೆ ಪ್ರಾರಂಭವಾಗಲಿದ್ದು ಭಾನುವಾರ ಶ್ರೀ ಸ್ವಾಮಿಗೆ ಎಣ್ಣೆಮ ಜನ ಸೇವೆ ಜರುಗಲಿದೆ ಸೋಮವಾರ ಯುಗಾದಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜಾ ಪುರಸ್ಕಾರಗಳು ನೆರವೇರಲಿದೆ.
ಮಂಗಳವಾರ ಚಂದ್ರಮಾನ ಯುಗಾದಿ ಪ್ರಯುಕ್ತವಾಗಿ ಬೆಳಿಗ್ಗೆ 7-30 ರಿಂದ 9-00 ಗಂಟೆಯವರೆಗೆ ನಡೆಯುವ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಸುವುದರ ಜೊತೆಗೆ ಮಹದೇಶ್ವರ ಸ್ವಾಮೀಜಿ ವಿವಿಧ ಪೂಜಾ ಪುರಸ್ಕಾರಗಳು ನೆರವೇರಿಸಿ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಎಳೆಯಲಾಗುವುದು.
ಭಕ್ತಾದಿಗಳ ಸುರಕ್ಷತೆಗಾಗಿ ಮುಂಜಾಗ್ರತೆ ಕ್ರಮ:
ಶ್ರೀ ಕ್ಷೇತ್ರದಲ್ಲಿ ನಾಳೆಯಿಂದ ಪ್ರಾರಂಭವಾಗಲಿರುವ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಬಿಸಿಲಿನ ತಾಪಕ್ಕೆ ಮಡಿಕೆಯಲ್ಲಿ ತಣ್ಣನೆಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಲೆ ಮಾದಪ್ಪನ ಸನ್ನಿಧಿಯ ಸುತ್ತಲೂ ನೆರಳಿನ ವ್ಯವಸ್ಥೆ, ದರ್ಶನದ ವ್ಯವಸ್ಥೆ ಹಾಗೂ ಪ್ರಸಾದದ ವ್ಯವಸ್ಥೆ ಹಾಗೂ ಸ್ವಚ್ಚತೆ ಹಾಗೂ ಇನ್ನಿತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಲೆ ಮಹದೇಶ್ವರ ದೇವಾಲಯದ ಸುತ್ತಮುತ್ತಲೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು ರಾತ್ರಿ ವೇಳೆಯಲ್ಲಿ ಜಗಮಗಿಸುತ್ತಿರುವ ವಿದ್ಯುತ್ ಬೆಳಕಿಗೆ ಕಂಗೊಳಿಸಲಿದೆ. ದೇವಾಲಯದ ಪ್ರಾಂಗಣದಲ್ಲಿ ಪೆಂಡಲ್ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.