ಬಾಬು ಜಗಜೀವನ್ ರಾಮ್ ರವರ ಆದರ್ಶಗಳು ಮಾದರಿಯಾಗಿವೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.06: ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂಸದರಾಗಿ, ಉತ್ತಮ ವಾಗ್ಮಿಯಾಗಿ, ಸಾಮಾಜಿಕ ಹೋರಾಟಗಾರರಾದ ಬಾಬು ಜಗಜೀವನ್‍ರಾಮ್‍ರವರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ತಹಶೀಲ್ದಾರ್ ಲೋಕೇಶ್ ತಿಳಿಸಿದರು.
ಅವರು ಪಟ್ಟಣದ ಮಿನಿವಿಧಾನ ಸೌಧದಲ್ಲಿ ಬಾಬು ಜಗಜೀವನ್‍ರಾಮ್ ರವರ 117 ನೇ ಜನ್ಮದಿನೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 1905ರಲ್ಲಿ ಬಿಹಾರದ ಶಹಬಾದ್ ಜಿಲ್ಲೆಯ ಶಾಗ್ವಾ ಗ್ರಾಮದಲ್ಲಿ ಜನಿಸಿದ ಇವರು ಬಾಲ್ಯದಿಂದಲೂ ಚುರುಕು ಸ್ವಭಾವದವರಾಗಿದ್ದರು. ಜಾತಿಆಧಾರಿತ ತಾರತಮ್ಯವನ್ನು ಖಂಡಿಸಿದರು. ಹಿಂದುಳಿದವರು ರಾಜಕೀಯ ಪ್ರಾತಿನಿಧ್ಯ, ಮತದಾನ ಸೇರಿದಂತೆ ಹಲವು ಸವಲತ್ತುಗಳು ಸಿಗಬೇಕು ಎಂದು ಆಗ್ರಹಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾನೂನು ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಬಾಗವಹಿಸಿದ್ದರು.
ದೇಶದ ಉಪಪ್ರಧಾನಿಯಾಗಿ ಕೃಷಿಯು ದೇಶದ ಆರ್ಥಿಕತೆಯ ಬೆಳವಣಿಗೆಯ ಮೇಲೆ ತನ್ನದೇ ಆದ ಪರಿಣಾಮ ಬೀರಲಿದ್ದು ಹೆಚ್ಚುಹೆಚ್ಚು ಆಹಾರ ಉತ್ಪಾದನೆ ಮಾಡುವ ಮೂಲಕ ಹಸಿರುಕ್ರಾಂತಿ ಉಂಟಾಗಬೇಕು ಎಂಬ ಬಾಬು ಜಗಜೀವನ್‍ರಾಮ್ ರವರ ಆಲೋಚನೆ ಸರ್ವಕಾಲಕ್ಕೂ ಉತ್ತಮ ಚಿಂತನೆಯಾಗಿತ್ತು. ಅದರಂತೆ ಅವರನ್ನು ಹಸಿರುಕ್ರಾಂತಿಯ ಹರಿಕಾರ ಎಂದು ಕರೆಯಲಾಗುತ್ತಿತ್ತು. ಆಹಾರ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದರು. ಭಾರತ ದೇಶದ ಉಪಪ್ರಧಾನಿಯಾಗಿ ದೇಶದ ಬಗ್ಗೆ ಅವರು ಹೊಂದಿದ್ದ ಚಿಂತನೆಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿವೆ. ದೂರದೃಷ್ಟಿ ಚಿಂತನೆಯುಳ್ಳ ವ್ಯಕ್ತಿತ್ವದ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ಪರಮೇಶ್, ಬಾಬುಜಗಜೀವನ್ ರಾಮ್ ಸಂಘದ ಪದಾಧಿಕಾರಿಗಳು, ಕಂದಾಯ ಇಲಾಖೆಯ ನೌಕರರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಬಾಗವಹಿಸಿದ್ದರು.