ಗೋಪಿನಾಥಂ ಜಲಾಶಯದಲ್ಲಿ ತಾಯಿ ಇಬ್ಬರು ಮಕ್ಕಳು ನೀರು ಪಾಲು
ಸಂಜೆವಾಣಿ ವಾರ್ತೆ
ಹನೂರು ಏ 6 :- ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗೋಪಿನಾಥಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುದೂರು ಗ್ರಾಮದ 33 ವರ್ಷದ ಮೀನಾ ಎಂಬ ಮಹಿಳೆ ಹಾಗೂ ಇವರ ಮಕ್ಕಳಾದ 13 ವರ್ಷದ ಪವಿತ್ರ ಮತ್ತು 11 ವರ್ಷದ ಕೀರ್ತಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಘಟನೆ ವಿವರ : ಪುದೂರು ನಿವಾಸಿಗಳಾದ ಮೀನಾ ಪುತ್ರಿಯರಾದ ಪವಿತ್ರ, ಕೀರ್ತಿ, ಮಗ ಸುರೇಂದ್ರ ಶುಕ್ರವಾರ ಬೆಳಗ್ಗೆ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದಾರೆ.
ಬಟ್ಟ ತೊಳೆದ ನಂತರ ಬಟ್ಟೆಯನ್ನು ಹಿಂಡಲು ಹೋಗಿ ತಾಯಿ ಮೀನಾ ಆಕಸ್ಮಿಕವಾಗಿ ಕಾಲು ಜಾರಿಬಿದಿದ್ದಾರೆ. ತಕ್ಷಣ ಇಬ್ಬರೂ ಹೆಣ್ಣು ಮಕ್ಕಳಾದ ಕೀರ್ತಿ ಹಾಗೂ ಪವಿತ್ರ ತಾಯಿಯನ್ನು ರಕ್ಷಣೆ ಮಾಡಲು ಹೋಗಿ ಇವರು ಸಹ ಮುಳುಗಿದ್ದಾರೆ.
ಸ್ಥಳದಲ್ಲಿಯೇ ಇದ್ದ ಮಗ ಸುರೇಂದ್ರ ತಂದೆಯವರಿಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರು ನೀರು ಪಾಲಾಗಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಮೂವರನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆ ಮಲೆ ಮಹದೇಶ್ವರ ಬೆಟ್ಟಕ್ಕೆ ರವಾನಿಸಲಾಗಿದೆ.
ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.