ಕೊಳವೆಬಾವಿ ಕೊರೆÀಯಲು ಪೂರ್ವಾನುಮತಿ ಕಡ್ಡಾಯ: ಡಿಸಿ ಭೂಬಾಲನ್
ಸಂಜೆವಾಣಿ ವಾರ್ತೆ,
ವಿಜಯಪುರ, ಏ.6 :ಯಾವುದೇ ಕೊಳವೆಬಾವಿ ಕೊರೆಯುವ ಪೂರ್ವದಲ್ಲಿ ಸ್ಥಳೀಯ ಆಡಳಿತದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ವಿಸಿ ಹಾಲ್‍ನಲ್ಲಿ ಶುಕ್ರವಾರ ಕಂದಾಯ, ಶಾಲಾ ಶಿಕ್ಷಣ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳೊಂದಿಗೆ ತುರ್ತು ವಿಡಿಯೋ ಸಂವಾದÀ ಸಭೆ ನಡೆಸಿ ಮಾತನಾಡಿದರು.
ಇಂಡಿ ತಾಲೂಕಿನ ಲಚ್ಯಾಣ ತೋಟದ ಕೊಳವೆಬಾವಿಯಲ್ಲಿ ಸಿಲುಕಿದ್ದ ಮಗುವಿನ ಪ್ರಕರಣ ಭವಿಷ್ಯದಲ್ಲಿ ಮರುಕಳಿಸದಿರಲು ಗ್ರಾಮ, ಪಟ್ಟಣ. ನಗರ ಯಾವುದೇÀ ಪ್ರದೇಶದಲ್ಲಾದರೂ ಕೊಳವೆಬಾವಿ ಕೊರೆಯವ ಮುನ್ನ ರೈತರು, ಸಾರ್ವಜನಿಕರಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಸಫಲ ಇಲ್ಲವೆ ವಿಫಲವಾದ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವ ವ್ಯವಸ್ಥೆಯಾಗಬೇಕು ಎಂಬುದರ ಕುರಿತು ಸ್ಥಳೀಯ ಆಡಳಿತಾಧಿಕಾರಿಗಳು ಸೂಚನಾ ಫಲಕಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಈಗಾಗಲೇ ಕೊಳವೆಬಾವಿಗಳ ಸುರಕ್ಷತೆ ಕುರಿತಂತೆ ಸರಕಾರದ ಸುತ್ತೋಲೆ ಇದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು. ಗ್ರಾಮ ಪಂಚಾಯತ್ ಅಧಿಕಾರಿ, ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಸರಕಾರದ ಈ ಸುತ್ತೋಲೆಯ ನಿರ್ದೇಶನಗಳನ್ನು ಪಾಲಿಸದೇ ಕರ್ತವ್ಯಲೋಪವೆಸಗಿ ಯಾವುದೇ ಅವಘಡ ಜರುಗಿದಲ್ಲಿ ಅಂತಹ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ದ ಇಲಾಖಾ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಒಂದು ವಾರದೊಳಗಾಗಿ ಜಿಲ್ಲೆಯಲ್ಲಿರುವ ಸರಕಾರಿÀ ಕೊಳವೆಬಾವಿಗಳ ಮಾಹಿತಿಯನ್ನು ನೀಡಬೇಕು, ಚಾಲ್ತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಕುರಿತ ಅಂಕಿ ಸಂಖ್ಯೆಗಳ ನಿಖರವಾದ ಮಾಹಿತಿಯನ್ನು ನೀಡುವ ಕಾರ್ಯವಾಗಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರಪೇಕ್ಷಣಾಪತ್ರ ಪಡೆಯದ ಕೊಳವೆಬಾವಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಬಾರದೆಂದು ಸೂಚಿಸಿದರು.
ಗುರುವಾರದಂದು ನಡೆದ ಎಸ್ ಎಸ್ ಎಲ್ ಸಿ ತೃತೀಯ ಭಾಷಾ ಪತ್ರಿಕೆಗೆ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿ ಕೊಡಲಾಗಿದೆ ಎಂಬ ದೂರು ಬರಲಾಗಿದ್ದು, ಈ ಕುರಿತಂತೆ ಸಂಬಂಧಪಟ್ಟವರ ವಿರುದ್ದ ಈಗಾಗಲೇ ಶಿಸ್ತು ಕ್ರಮ ಜರುಗಿಸಿದ್ದು, ಶನಿವಾರದಂದು ನಡೆಯುವ ದ್ವಿತೀಯ ಭಾಷಾ ಇಂಗ್ಲೀಷ್ ಪತ್ರಿಕೆಯ ಪರೀಕ್ಷೆಗೆ ಜಿಲ್ಲೆಯ ಎಲ್ಲಾ 127 ಪರೀಕ್ಷಾ ಕೇಂದ್ರಗಳಿಗೂ ಚಾಲ್ತಿಯಲ್ಲಿರುವ ಸಿ.ಸಿ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯವಾಗಬೇಕು. ನಕಲು ಮಾಡುವ ವಿದ್ಯಾರ್ಥಿಗಳನ್ನು ಡಿಬಾರ್ ಹಾಗೂ ನಕಲು ಪೂರೈಸುವವರಿಗೆ ಸಹಕರಿಸುವವರ ವಿರುದ್ದ ಎಫ್ ಐ ಆರ್ ಮಾಡುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜರುಗಿಸಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಕ್ಕೆ ಸಮರ್ಪಕವಾಗಿ ನೀರಿನ ಟ್ಯಾಂಕರ್Àಗಳನ್ನು ಕಳುಹಿಸಿ ಜವಾಬ್ದಾರಿಯಿಂದ ಕೆಲಸಮಾಡಬೇಕು. ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವದರಿಂದ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿ ಇತರರು ಇದ್ದರು.