ಬಹೂಪಯೋಗಿ ಬಿದಿರಿನಿಂದ ಆರ್ಥಿಕ ಸದೃಢತೆ
ಕಲಬುರಗಿ:ಸೆ.19: ಬಿದಿರು ಅರಣ್ಯ ಬೆಳೆಯಾಗಿದ್ದು, ಬುಟ್ಟಿ, ಪೀಠೋಪಕರಣಗಳ ತಯಾರಿಕೆ, ಕೃಷಿ ಉಪಕರಣಗಳ ತಯಾರಿಕೆ, ಮನೆ ನಿರ್ಮಾಣಕ್ಕೆ ಸಲಕರಣೆ, ಜೊತೆಗೆ ಭವಿಷ್ಯದಲ್ಲಿ ಇದನ್ನು ಆಹಾರ, ಟಿಂಬರ್, ಇಂಧನವಾಗಿ ಉಪಯೋಗವಾಗಲಿದ್ದು, ಇದನ್ನು ‘ಹಸಿರು ಬಂಗಾರ’ ಎಂದು ಕರೆಯಲಾಗುತ್ತದೆ. ಬಹೂಪಯೋಗಿಯಾದ ಬಿದರಿನಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದ್ದು, ರೈತರು ಇದರ ಬಗ್ಗೆ ಚಿತ್ತ ಹರಿಸುವುದು ಉತತ್ಮವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಮಹಾದೇವ ನಗರದಲ್ಲಿನ ಶಿವಾ ವಿದ್ಯಾಮಂದಿರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಬಿದಿರು ದಿನಾಚರಣೆ’ಯನ್ನು ಬಿದಿರಿನ ಸಸಿಗೆ ನೀರುಣಿಸುವ ಮೂಲಕ ಚಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕಲ್ಲಿದ್ದಿಲನ ಕೊರತೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬಿದಿರನ್ನು ಪರ್ಯಾಯ ಇಂಧನವನ್ನಾಗಿ ಬಳಸಬಹುದಾಗಿದೆ. ಬಿದಿರಿನ ಎಲೆಗಳು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿವೆ. ಅರಣ್ಯ ವೃದ್ಧಿಯಾಗುತ್ತದೆ. ಉಷ್ಣಾಂಶ ನಿಯಂತ್ರಿಸುತ್ತದೆ. ಬಿದಿರು ಸಸಿಗಳನ್ನು ನೆಟ್ಟು, ಪೋಷಿಸಬೇಕು ಎಮದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ನಿವೃತ್ತ ಶಿಕ್ಷಕ ನೀಲಕಂಠಯ್ಯ ಹಿರೇಮಠ, ದೇವೇಂದ್ರಪ್ಪ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕ ರೋಹಿತ್ ಸಿ.ವೈರಪುಲ್ ಹಾಗೂ ವಿದ್ಯಾರ್ಥಿಗಳು ಇದ್ದರು.