ಪೆರಿಯಾರ ರಾಮಸ್ವಾಮಿ ಸಾಮಾಜಿಕ ಕೊಡುಗೆ ಅವಿಸ್ಮರಣೀಯ
ಕಲಬುರಗಿ:ಸೆ.19: ಗಾಂಧೀಜಿಯವರ ಆಪ್ತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಮೌಢ್ಯತೆ, ಅಂಧಶೃದ್ಧೆ, ಕಂದಾಚಾರ, ಜಾತಿಯತೆ, ಅಸ್ಪಷ್ಯತೆ ಅಂತಹ ಮುಂತಾದ ಸಾಮಾಜಿಕ ಪಿಡುಗಗಳ ನಿರ್ಮೂಲನೆ ನಿರಂತರವಾಗಿ ಶ್ರಮಿಸುವ ಮೂಲಕ ಅಸಂಖ್ಯಾತ ಜನರಿಂದ ‘ಗೌರವಾನ್ವಿತ’ ಎಂಬ ಅರ್ಥದ ‘ಪೆರಿಯಾರ್’ ಎಂಬ ಬಿರುದನ್ನು ಪಡೆದ ಶ್ರೇಷ್ಠ ಸಮಾಜ ಸುಧಾರಕ ಪೆರಿಯಾರ ರಾಮಸ್ವಾಮಿ ಅವರ ಸಾಮಾಜಿಕ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಶ್ರೇಷ್ಟ ಸಮಾಜ ಸುಧಾರಕ ‘ಪೆರಿಯಾರ ರಾಮಸ್ವಾಮಿ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪೆರಿಯಾರ ರಾಮಸ್ವಾಮಿ ಅವರು ದೇಶ ಕಂಡ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದಾರೆ. ಅವರಲ್ಲಿರುವ ದೇಶಭಕ್ತಿ, ದೀನ-ದಲಿತ, ಶೋಷಿತ, ಬಡವರು, ಅಸಹಾಯಕರ ಸೇವಾಮನೋಭಾವ ಮಾದರಿಯಾಗಿದೆ. ವಿದ್ಯಾರ್ಥಿಗಳು ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು ದೇಶಸೇವೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ನಿಲೊಫರ್ ಶೇಖ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.