ಜಾನುವಾರುಗಳಿಗೆ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ : ಡಾ.ನರಸಪ್ಪ
ಔರಾದ್ : ಏ.5:ಎಪ್ರಿಲ್ 2ರಿಂದ 30ರವರೆಗೆ ರಾಷ್ಟ್ರೀಯ ಜಾನುವಾರು ನಿಯಂತ್ರಣ 5ನೇ ಸುತ್ತಿನ ಕಾಲು, ಬಾಯಿ, ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಎಲ್ಲ ರೈತ ಬಾಂಧವರು ತಮ್ಮ ಜಾನುವಾರುಗಳಿಗೆ ರೋಗ ಬರದಂತೆ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸಬೇಕು ಎಂದು ಬೀದರ್ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ನರಸಪ್ಪ ಎ.ಡಿ.ಹೇಳಿದರು.
ಗುರುವಾರ ತಾಲೂಕಿನ ಜೀರ್ಗಾ(ಬಿ)ದಲ್ಲಿ ಸಂತಪುರ ಪಶು ಆಸ್ಪತ್ರೆ ಸಹಯೋಗದಲ್ಲಿ ಜಾನುವಾರುಗಳಿಗೆ ನೀಡುತ್ತಿರುವ ಕಾಲು ಬಾಯಿ ಲಸಿಕೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಲಸಿಕಾ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಎಪ್ರಿಲ್ 1ರಿಂದ 30ರವರೆಗೆ ರೈತರ ಮನೆ ಬಾಗಿಲಿಗೆ ಲಿಸಿಕೆದಾರರು ಆಗಮಿಸಿ, ದನ ಹಾಗೂ ಎಮ್ಮೆಗಳಿಗೆ ಎಫ್.ಎಮ್.ಡಿ ಲಸಿಕೆಯನ್ನು ಉಚಿತವಾಗಿ ತಮ್ಮ ಜಾನುವಾರುಗಳಿಗೆ ನೀಡುತ್ತಾರೆ. ಕಾಲು ಬಾಯಿ ಜ್ವರ ರೋಗ ವನ್ನು ತಡೆಗಟ್ಟಲು ಮತ್ತು ಎಫ್.ಎಮ್.ಡಿ.ಸಿ.ಪಿ ಕಾರ್ಯಕ್ರಮವನ್ನು ಎಲ್ಲಾ ರೈತಬಾಂಧವರು ಸದುಪಯೋಗ ಪಡೆದುಕೊಳ್ಳಬೇಕು.
ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 2,99,144 ಲಕ್ಷ ಜಾನುವಾರುಗಳಿದ್ದು, ಸದ್ಯಕ್ಕೆ 2 ಲಕ್ಷ 60 ಸಾವಿರ ಅಂದಾಜಿನಲ್ಲಿ ಜಾನುವಾರುಗಳಿವೆ. ಔರಾದ್ ತಾಲೂಕಿನಲ್ಲಿ 57ಸಾವಿರ ಜಾನುವಾರುಗಳಿದ್ದು, ಪ್ರತಿ ತಾಲೂಕಿನಲ್ಲಿ 50ರಿಂದ 60 ಜನ ಸಿಬ್ಬಂದಿಗಳು ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದಾರೆ. ದಿನಾಲು ತಾಲೂಕಿನಿಂದ ಐದು ಸಾವಿರಕ್ಕಿಂತ ಹೆಚ್ಚಿನ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ರೈತರು ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ಕೈಜೋಡಿಸಿ ಆರು ತಿಂಗಳ ವಯಸ್ಸಿಗಿಂತ ಹೆಚ್ಚಿರುವ ಎಲ್ಲ ಜಾನುವಾರುಗಳಿಗೆ ಹಾಗು ಐದು ತಿಂಗಳಕ್ಕಿಂತ ಹೆಚ್ಚಿನ ಗರ್ಭ ಇರುವ ಜಾನುವಾರುಗಳನ್ನು ಬಿಟ್ಟುಕೊಟ್ಟು ಉಳಿದ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬಹುದೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಬಸವರಾಜ್ ಮುಚಳಂಬೆ, ಶಿವರಾಜ್ ಶಿವಪೂಜೆ, ಬಸವರಾಜ್, ಸಂತೋಷ, ಶಿವಾಜಿ, ರೇಣುಕಾ, ರಾಜೆಮ್ಮ, ಜಗದೇವಿ ಇದ್ದರು.