ಹೊಸ ತಹಸೀಲ್ ಕಚೇರಿ ಸ್ಥಳಾಂತರಕ್ಕೆ ಪಂಚಾಳ ವಿರೋಧ
ಅಫಜಲಪುರ:ಏ.5: ಪಟ್ಟಣದ ಕಲಬುರಗಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಭೀಮಾ ಏತ ನೀರಾವರಿ ಕಚೇರಿಯಲ್ಲಿ ಹೊಸ ತಹಸೀಲ್ ಕಾರ್ಯಾಲಯ ನಿರ್ಮಿಸಲು ಉದ್ದೇಶಿಸಿರುವ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಈರಣ್ಣಾ ಪಂಚಾಳ ಆಗ್ರಹ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ತಹಸೀಲ್ ಕಾರ್ಯಾಲಯವು ಸುಮಾರು 3 ಎಕರೆ 20 ಗುಂಟೆ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಭವ್ಯವಾದ ವಿಧಾನಸೌಧ ಕಟ್ಟಬಹುದು. ಇಷ್ಟೆಲ್ಲಾ ಅನುಕೂಲತೆಗಳು ಇದ್ದರೂ ಸಹ ಯಾವ ಉದ್ದೇಶಕ್ಕಾಗಿ ತಹಸೀಲ್ ಕಾರ್ಯಾಲಯ ಸ್ಥಳಾಂತರ ಮಾಡುತ್ತಿರುವುದು ಗೊತ್ತಾಗುತ್ತಿಲ್ಲ. ಇದರಿಂದ ಸಾರ್ವಜನಿಕರು, ರೈತರು, ವಯೋವೃದ್ಧರು ಹಾಗೂ ಗ್ರಾಮೀಣ ಭಾಗದ ಜನರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ.
ಬಸ್ ನಿಲ್ದಾಣ, ಬಟ್ಟೆ ಅಂಗಡಿಗಳು, ಸಾರ್ವಜನಿಕ ಆಸ್ಪತ್ರೆ, ಪೆÇಲೀಸ್ ಠಾಣೆ, ತರಕಾರಿ ಮಾರುಕಟ್ಟೆ, ಪುರಸಭೆ ಹೀಗೆ ಪ್ರತಿಯೊಂದು ವಸ್ತು ಖರೀದಿಸಲು ಅಥವಾ ಸರ್ಕಾರಿ ಇಲಾಖೆಗಳಿಗೆ ತೆರಳಲು ತಹಸೀಲ್ ಕಾರ್ಯಾಲಯ ಸಮೀಪ ಇರುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಅಲ್ಲದೆ ತಹಸೀಲ್ ಕಚೇರಿಯನ್ನು ಭೀಮಾ ಏತ ನೀರಾವರಿಗೆ ಸ್ಥಳಾಂತರಿಸಿದರೆ ಇದರಿಂದ ವ್ಯಾಪಾರಿಗಳಿಗೆ, ಹೋಟೆಲ್ ಮಾಲೀಕರಿಗೆ, ಬೀದಿ ಬದಿಯ ವ್ಯಾಪಾರಸ್ಥರು ಸಾಕಷ್ಟು ತೊಂದರೆ ಅನುಭವಿಸುವುದಲ್ಲದೆ ಅವರ ಕೌಟುಂಬಿಕ ನಿರ್ವಹಣೆ ಮತ್ತು ಆರ್ಥಿಕ ಭದ್ರತೆಗೆ ಕೊಡಲಿ ಪೆಟ್ಟು ಬೀಳುವ ಪ್ರಸಂಗ ಬಂದೊದಗಲಿದೆ.
ಹೀಗಾಗಿ ಜನಪ್ರತಿನಿಧಿಗಳು, ವ್ಯಾಪಾರಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಪಕ್ಷಭೇದ ಮರೆತು ಹೋರಾಟ ಮಾಡಬೇಕು ಹಾಗೂ ಸಂಬಂಧಪಟ್ಟ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗಿರುವ ಸ್ಥಳದಲ್ಲೇ ಹೊಸ ವಿಧಾನಸೌಧ ಕಟ್ಟಡ ನಿರ್ಮಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರಗತಿಪರ ಹೋರಾಟಗಾರರು, ರೈತರು ಕೂಡಿಕೊಂಡು ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಮನವಿ ಮಾಡಿದ್ದಾರೆ.