ಕೊಳವೆ ಬಾವಿ ಮುಚ್ಚಲು ತಹಸೀಲ್ದಾರ್ ಸೂಚನೆ
ಅಫಜಲಪುರ: ಏ.5:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ 2 ವರ್ಷದ ಬಾಲಕನೋರ್ವ ಕೊಳವೆ ಬಾವಿಯಲ್ಲಿ ಬಿದ್ದ ಘಟನೆಯನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ತಹಸೀಲ್ದಾರ್ ಸಂಜೀವಕುಮಾರ ದಾಸರ್ ತಿಳಿಸಿದ್ದಾರೆ.
ನಮ್ಮ ತಾಲೂಕಿನಲ್ಲಿ ಈಗಾಗಲೇ ನೀರಿಗಾಗಿ ಕೊಳವೆ ಬಾವಿ ಕೊರೆಸಿ ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚದೆ ಹಾಗೆ ಬಿಟ್ಟಿರುವಂತಹ ಸರ್ಕಾರಿ ಅಥವಾ ಖಾಸಗಿ ಬೋರವೆಲ್ ಗಳನ್ನು ಗುರುತಿಸಿ ಕೂಡಲೇ ಅವುಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಬೇಕು. ಇಂತಹ ಕೆಲಸದಲ್ಲಿ ಯಾರೂ ಕೂಡ ನಿರ್ಲಕ್ಷ್ಯತೆ ವಹಿಸಬಾರದು. ಸಾರ್ವಜನಿಕರಿಗೆ ತೆರೆದ ಕೊಳವೆ ಬಾವಿಗಳು ಯಾವುದೇ ಸ್ಥಳದಲ್ಲಿ ಕಂಡು ಬಂದರೆ ಕೂಡಲೇ ಹತ್ತಿರದ ಗ್ರಾಮ ಪಂಚಾಯತಿ, ಪುರಸಭೆ ಅಥವಾ ತಾಲೂಕು ಆಡಳಿತ ಕಚೇರಿಗೆ ವಿಷಯ ತಿಳಿಸಿ ಸಹಕರಿಸಬೇಕು ಎಂದು ಕೋರಿದ್ದಾರೆ.