ಪರೀಕ್ಷಾ ಕೇಂದ್ರಕ್ಕೆ ಅಕ್ರಮ ಪ್ರವೇಶ: ಶಿಕ್ಷಕ ಅಮಾನತ್ತು
ಅಫಜಲಪುರ:ಏ.5: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಬಂಕಲಗಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಭೀಮಾಶಂಕರಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಕಳೆದ ಏಪ್ರಿಲ್ 2ರಂದು ತಾಲೂಕಿನ ಶಿರವಾಳ ಗ್ರಾಮದ ಶ್ರೀ ವೀರ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ತಪಾಸಣೆಗೆ ಹೋಗಿದ್ದ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಲ್ಲಿನ ನಿಬರ್ಂಧಿತ ಪ್ರದೇಶದಲ್ಲಿ ಓರ್ವ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಅಲೆದಾಡುತ್ತಿರುವುದು ಕಂಡು ಬಂದಿದೆ. ಆತನನ್ನು ಹಿಡಿದು ವಿಚಾರಣೆ ಮಾಡುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಬೆನ್ನಟ್ಟಿ ಹಿಡಿದು ವಿಚಾರಣೆ ಮಾಡಿದಾಗ ಅವರು ಬಂಕಲಗಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಭೀಮಾಶಂಕರ ಎಂಬುದು ದೃಢಪಟ್ಟಿದೆ.
ಪರೀಕ್ಷೆ ಕೇಂದ್ರದ ಸುತ್ತಲೂ ಪರೀಕ್ಷಾ ನಿಯಮದಂತೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಆ ನಿಷೇಧಾಜ್ಞೆಯನ್ನು ಮೀರಿ ಹೊರಗಡೆಯಿಂದ ಸಾರ್ವಜನಿಕರು ಮತ್ತು ಪರೀಕ್ಷಾ ಕಾರ್ಯದಲ್ಲಿ ಅಧಿಕೃತವಾಗಿ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆಯವರು ನಿಷೇಧಿತ ಪ್ರವೇಶದಲ್ಲಿ ಪ್ರವೇಶ ಮಾಡುವಂತಿಲ್ಲ. ಬಂಕಲಗಾ ಶಿಕ್ಷಕ ಭೀಮಾಶಂಕರ ಅವರು ಜವಾಬ್ದಾರಿಯುತ ಸರ್ಕಾರಿ ಶಿಕ್ಷಕರಾಗಿ ಅಶಿಸ್ತು ತೋರಿ ಪರೀಕ್ಷಾ ಕೇಂದ್ರದಲ್ಲಿ ಅವರಿಗೆ ಯಾವುದೇ ನಿಯೋಜನೆ ಮಾಡದೇ ಇದ್ದರೂ ದುರುದ್ದೇಶಪೂರಿತವಾಗಿ ಪರೀಕ್ಷಾ ಕೇಂದ್ರದೊಳಗೆ ಅತಿಕ್ರಮಣವಾಗಿ ಬಂದಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರಿಗಳು ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.