ಬೈಕ್ ರ್ಯಾಲಿ ಕಾರ್ಯಕ್ರಮ
ಬ್ಯಾಡಗಿ,ಏ.5: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆ ಮಾಡುವ ಅವಕಾಶ ಇರುವುದರಿಂದ ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಮಮತಾ ಹೊಸಗೌಡ್ರ ಕರೆ ನೀಡಿದರು.
ತಾಲೂಕಾ ಸ್ವೀಪ್ ಸಮಿತಿಯ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ – 2024ರ ಮತದಾನ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ವಿಶೇಷ ಚೇತನರ ಯಂತ್ರಚಾಲಿತ ಬೈಕ್ ರಾಲಿ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಯಾವುದೇ ಆಮೀಷಗಳಿಗೆ ಒಳಗಾಗದಂತೆ ಮುಕ್ತ ಹಾಗೂ ನಿರ್ಭೀತಿಯಿಂದ ಸ್ವಯಂಪ್ರೇರಿತರಾಗಿ ಮೇ 7 ರಂದು ನಡೆಯುವ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಮತ ಕೇಂದ್ರಗಳಿಗೆ ತೆರಳಿ ಮತದಾನ ಮಾಡುವಂತೆ ತಿಳಿಸಿದರು.
ತಾಲೂಕು ಸ್ವೀಪ್ ಸಮೀತಿ ಅಧ್ಯಕ್ಷರಾದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಅವರು ಮಾತನಾಡಿ, ಯಾರು ಸಹ ಮತದಾನದಿಂದ ವಂಚಿತರಾಗದೇ ಕಡ್ಡಾಯವಾಗಿ ನೀವು ಮತ್ತು ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರಿಂದ ಮತದಾನ ಮಾಡಿಸುವ ಮೂಲಕ ತಮ್ಮ ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು .
ವಿಶೇಷ ಚೇತನರ ಯಂತ್ರಚಾಲಿತ ಬೈಕ್ ರಾಲಿಯು ತಾಲೂಕ ಪಂಚಾಯತದಿಂದ ಪ್ರಾರಂಭವಾಗಿ ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೂ ತಲುಪಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಎನ್. ತಿಮ್ಮಾರೆಡ್ಡಿ, ತಾಲೂಕ ವಿಕಲಚೇತನರ ಸಂಘದ ಅಧ್ಯಕ್ಷ ಪಾಂಡುರಂಗ ಸುತಾರ, ಟಿಐಈಸಿ ಅಕ್ಷಯ ದೇಶಪಾಂಡೆ, ಎಂ.ಆರ್.ಡಬ್ಲ್ಯೂ ನಾಗರಾಜ ಅಗಸನಹಳ್ಳಿ, ಯು.ಆರ್.ಡಬ್ಲ್ಯೂ ಅರವಿಂದ ಕಮ್ಮಾರ ಹಾಗೂ ಎಲ್ಲ ಗ್ರಾಮ ಪಂಚಾಯಿತಿಯ ವಿ ಆರ್ ಡಬ್ಲ್ಯೂ ಸಿಬ್ಬಂದಿ ಮತ್ತು ತಾಲೂಕು ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.