ಸ್ವ ಪ್ರೇರಣೆಯಿಂದ ಮತದಾನಕ್ಕೆ ಕರೆ
ಬ್ಯಾಡಗಿ,ಏ.5: ಮತದಾನ ಸಂವಿಧಾನಾತ್ಮಕವಾಗಿ ಬಂದ ಹಕ್ಕು, ಅದನ್ನು ಮೇ 7ರಂದು ನಡೆಯುವ ಲೋಕಸಭಾ ಕ್ಷೇತ್ರದ ಚುನಾವಣಾ ಹಬ್ಬದಲ್ಲಿ ಚಲಾಯಿಸಲು ಎಲ್ಲರೂ ಭಾಗವಹಿಸಬೇಕು ಎಂದು ಕುಮ್ಮೂರು ಗ್ರಾಪಂ ಅಭಿವೃಧ್ದಿ ಅಧಿಕಾರಿ ಗದಿಗೆಪ್ಪ ಕೊಪ್ಪದ ಹೇಳಿದರು.
ತಾಲೂಕಿನ ಕುಮ್ಮೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಲುವೆ ಆಭಿವೃದ್ಧಿ ಕಾಮಗಾರಿಯಲ್ಲಿ ಪಾಲ್ಗೊಂಡ ಕೂಲಿ ಕಾರ್ಮಿಕರಿಗೆ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೇಕಾದ ಉತ್ತಮ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ. ಎಲ್ಲರೂ ತಮ್ಮ ಸ್ವಪ್ರೇರಣೆಯಿಂದ ಮತದಾನ ಮಾಡಬೇಕು ಈ ನಿಟ್ಟಿನಲ್ಲಿ ಯುವ ಮತದಾರರೂ ಸಹ ಜಾಗೃತರಾಗಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಐಇಸಿ ಸಂಯೋಜಕ ಅಕ್ಷಯ ದೇಶಪಾಂಡೆ ಹಾಗೂ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.