ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ
ನವಲಗುಂದ,ಏ5: ಲೋಕಸಭಾ ಚುನಾವಣೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆದ ಸ್ವರೂಪಾ ಟಿ ಕೆ ಅವರು ಶುಕ್ರವಾರ ತಾಲ್ಲೂಕಾ ಪಂಚಾಯತಿ ಆವರಣದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಆಮಿಷಕ್ಕೆ ಒಳಗಾಗದೆ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಲ್ಲರೂ ಮತದಾನ ಪ್ರಕ್ರಿಯೆ ಪಾಲ್ಗೊಂಡು ನೂರರಷ್ಟು ಮತದಾನ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಪ್ರಾಮುಖ್ಯತೆಗೆ ಅರ್ಥ ಬರುತ್ತದೆ’ ಎಂದರು.
ನಂತರ ಪಟ್ಟಣದ ವಿವಿಧ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕವಾಗಿ ಕಡ್ಡಾಯ ಮತದಾನ ಮಾಡುವ ಘೋಷಣೆಗಳ ಮೂಲಕ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.
ತಾ ಪಂ ಸಹಾಯಕ ನಿರ್ದೇಶಕರಾದ ಹರ್ಷವರ್ಧನ ಹಂಚಿನಾಳ, ಜಗದೀಶ್ ಹಡಪದ, ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾಗನೂರ, ಎಸ್ ಬಿ ತೋಟದ, ವಿರೇಶ ಗುಡದೂರಮಠ, ತೋಟಗಾರಿಕೆ ಇಲಾಖೆಯ ಸಂಜೀವಕುಮಾರ ಸೇರಿದಂತೆ ತಾ. ಪಂ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಣಇಲಾಖೆ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪುರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.