ನಿಮ್ಮೆಲ್ಲರ ಸೇವೆಗಾಗಿ ನನಗೊಂದು ಅವಕಾಶ ಕೊಡಿ: ಎಂ.ಲಕ್ಷ್ಮಣ್
ಸಂಜೆವಾಣಿ ನ್ಯೂಸ್
ಮೈಸೂರು: ಏ.05:- ಮೈಸೂರು ವಕೀಲರ ಸಂಘದ ಎಲ್ಲಾ ಸದಸ್ಯರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಬೆಂಬಲ ಸೂಚಿಸಿ ಹಾಗೂ ನಿಮ್ಮ ಮತಗಳನ್ನು ನೀಡಿ. ವಕೀಲರ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ನಿಮ್ಮೆಲ್ಲರ ಸೇವೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮತಯಾಚನೆ ಮಾಡಿದರು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಮತಯಾಚನೆ ಮಾಡಿ ಮಾತನಾಡಿ, ನಾನು ಪಾರ್ಲಿಮೆಂಟ್ ನಲ್ಲಿ ಸುಮ್ಮನೆ ಕುಳಿತು ಬರುವುದಿಲ್ಲ. ರಾಜ್ಯದ ಜನತೆಯ ಪರವಾಗಿ, ರಾಜ್ಯದ ಅಭಿವೃದ್ಧಿಯ ಪರವಾಗಿ ಮಾತನಾಡುತ್ತೇನೆ. ತಾವೆಲ್ಲರೂ ಮತ ನೀಡಿ ನನ್ನನು ಗೆಲ್ಲಿಸಿದ್ದಲ್ಲಿ ಸದಾ ಜನರ ಪರವಾಗಿ ಇದ್ದು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ತಮ್ಮ ಅವಧಿಯಲ್ಲಿ ಮೈಸೂರಿಗೆ 3.800 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಇಂದಿನ ಜಯದೇವ ಆಸ್ಪತ್ರೆ, ನಗರದ ಕಾಂಕ್ರೀಟ್ ರಸ್ತೆ, ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯ ಹೀಗೆ ಹಲವರು ಅಭಿವೃದ್ದಿಯಾಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಯು ಪ್ರವಾಸೋದ್ಯಮ ಸ್ಥಳವನ್ನಾಗಿ ನಿರ್ಮಿಸಲು ಉತ್ತಮವಾದ ಸ್ಥಳವಾಗಿದೆ. ಇದರ ಜೊತೆಗೆ ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ವಾತಾವರಣವಿದೆ. ಆದರೆ ಈ ಕಾರ್ಯಕ್ಕೆ ಹಿಂದಿನ ಸಂಸದರು ಪ್ರಯತ್ನಿಸಲಿಲ್ಲ. ಈ ಮಹತ್ವದ ಕಾರ್ಯವನ್ನು ಮಾಡುವಲ್ಲಿ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಮೈಸೂರು ಭಾಗದಲ್ಲಿ 1977 ರಲ್ಲಿ ಒಕ್ಕಲಿಗ ಸಮುದಾಯದ ತುಳಸಿದಾಸ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. 47 ವರ್ಷಗಳ ನಂತರ ಒಕ್ಕಲಿಗ ಸಮುದಾಯದವನಾದ ನನಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ, ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನನ್ನನು ಗುರುತಿಸಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ನನಗೆ ಹೆಚ್ಚಿನ ಬೆಂಬಲ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಶೇಠ್ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬಂತಹ ಮೂಲ ಉದ್ದೇಶವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಸರ್ಕಾರವನ್ನು ನಡೆಸುತ್ತಿದೆ. ಸಮಾಜದ ಬಡತನವನ್ನು ನಿರ್ಮೂಲನೆ ಮಾಡಿ, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಶಿಕ್ಷಣದ ಸೌಲಭ್ಯ ಎಲ್ಲರಿಗೂ ಸಿಗಬೇಕು ಎಂಬಂತಹ ಸಂವಿಧಾನದ ಆಶಯಂತೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಿದ್ದೇವೆ. ಲಕ್ಷ್ಮಣ್ ಅವರು ಮೈಸೂರಿನ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕೆ ದುಡಿದಿದ್ದಾರೆ. ತಾವೆಲ್ಲರೂ ಹೆಚ್ಚಿನ ಸಹಕಾರ ನೀಡಿ ಅವರನ್ನು ಗೆಲ್ಲಿಸಿ. ಜನ ಸಾಮಾನ್ಯರ ಪರ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಅವುಗಳನ್ನು ಜಾರಿಗೊಳಿಸಿದಂತಹ ಕೀರ್ತಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ, ಲಕ್ಷ್ಮಣ್ ಅವರು ಕಳೆದ 30 ವರ್ಷಗಳಿಂದ ಮೈಸೂರು ನಗರದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ಹೋರಾಟ ಮತ್ತು ಕಾರ್ಯ ವೈಖರಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದರು.
ಎಂ.ಲಕ್ಷ್ಮಣ್ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರಿಗೆ ಮೈಸೂರು ವಕೀಲರ ಸಂಘದ ವತಿಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ. ಅವರ ಗೆಲುವಿಗೆ ಎಲ್ಲರೂ ಸಹಕರಿಸೋಣ ಎಂದು ವಕೀಲರ ಸಂಘದ ಎಲ್ಲಾ ಸದಸ್ಯರಿಗೆ ತಿಳಿಸಿದರು.
ಮೈಸೂರು ವಕೀಲ ಸಂಘದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಉಪಮೇಯರ್ ಪುರುಷೋತ್ತಮ್, ಮಾಜಿ ಜಿ.ಪಂ. ಅಧ್ಯಕ್ಷ ಬಿ.ಎಂ.ರಾಮು, ಕಾರ್ಯದರ್ಶಿ ಎ.ಜಿ.ಸುಧೀರ್, ಉಪಾಧ್ಯಕ್ಷ ಚಂದ್ರ ಶೇಖರ್, ಮಾಜಿ ಕಾರ್ಯದರ್ಶಿ ಎಸ್. ಉಮೇಶ್, ಹಿರಿಯ ವಕೀಲರಾದ ಚಂದ್ರಮೌಳಿ, ನಗರದ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.