ದಾವಣಗೆರೆಯಲ್ಲಿ ಬಿಜೆಪಿ- ಜೆಡಿಎಸ್ ಒಗ್ಗಟ್ಟಿನ ಸಂದೇಶ ರವಾನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.4; ದಾವಣಗೆರೆ ಜಿಲ್ಲೆಯಲ್ಲಿ ವರಿಷ್ಠರ ಆದೇಶದಂತೆ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು‌ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕಿದೆ ಅದಕ್ಕಾಗಿ ನಾವೆಲ್ಲಾ ಸಮನ್ವರ ಸಭೆ ನಡೆಸಿದ್ದೇವೆ ಹಾಗೂ ಏ.೬ ರಂದು ಸಂಜೆ ೪ ಗಂಟೆಗೆ ಹರಿಹರದ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ ಎರಡೂ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುವುದು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.ನಗರದ ಅರುಣಚಿತ್ರಮಂದಿರದ ಮುಂಭಾಗದಲ್ಲಿರುವ ಲೋಕಸಭಾ ಕಾರ್ಯಾಲಯದಲ್ಲಿ‌ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಭೆ‌ ಬಳಿಕ ಬಿಜೆಪಿ‌ ಹಾಗೂ ಜೆಡಿಎಸ್ ಕಾರ್ಯಕರ್ತರು ಜಿಲ್ಲೆಯಾದ್ಯಂತ ಪ್ರಚಾರ ನಡೆಸಲಿದ್ದಾರೆಂದರು.ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್  ಮಾತನಾಡಿ ರಾಜ್ಯದಲ್ಲಿ ಹೊಸ ಬದಲಾವಣೆಯ ಅಲೆ ಬೀಸುತ್ತಿದೆ.  ಭವಿಷ್ಯದ ಭಾರತದ ನಿರ್ಮಾಣಕ್ಕಾಗಿ ಭಾರತದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲ ನೀಡಲಿದ್ದೇವೆ ಎಂದರು.ಬದಲಾದ ರಾಜಕಾರಣದಲ್ಲಿ ಮೋದಿ ದೇಶಕ್ಕೆ ಸೂಕ್ತ ಅವರು ಮತ್ತೊಮ್ಮೆ ಪ್ರಧಾನಿಯಾಗಿ ದೇಶದ ರಕ್ಷಣೆ ಅಭಿವೃದ್ಧಿ ಚಿಂತನೆ ಮಾಡಲೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸೀಟು ಹಂಚಿಕೆಯ ಪ್ರಹಸನ ನಡೆಯುತ್ತಿದ್ದ ವೇಳೆ ಅನೇಕ ಗೊಂದಲಗಳಿದ್ದವು ನಮ್ಮ ಪಕ್ಷದಲ್ಲಿ ಸೀಟು ಹಂಚಿಕೆಯಲ್ಲಿ ಮೂರು ಸ್ಥಾನ ಬಿಡಲು ಗೊಂದಲ ವಾಗಿತ್ತು.ಕೆಲ ನಾಯಕರಲ್ಲಿ ವ್ಯತ್ಯಾಸ ಕಂಡುಬಂದಿತ್ತು ಆದರಿಂದು ಎಲ್ಲಾ ಬಗೆಹರಿದಿದೆ ಈ ಸನ್ನಿವೇಶದಲ್ಲಿ ನಾವೆಲ್ಲ ಒಟ್ಟಾಗಿ ಒಂದಾಗಿ ದೇಶಕ್ಕಾಗಿ ಕೆಲಸ ಮಾಡಲಿದ್ದೇವೆ.ನಾವೆಲ್ಲಾ ಒಂದೇ ವೇದಿಕೆಯಲ್ಲಿ ಸಮನ್ವಯ ಸಾಧಿಸಲು ಒಪ್ಪಿಗೆ ನೀಡಿದ್ದಾರೆಂದರು.ಬಿಜೆಪಿ ಮುಖಂಡರೊಂದಿಗೆ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಪ್ರಾಮಣಿಕವಾಗಿ ದುಡಿಯಬೇಕು ಎಂಬ ಸಂದೇಶ ರವಾನಿಸಿದ್ದೇವೆ ಎಂದರು.