ಸಾಧ್ಯವಾಗದ ಕೆ.ಎಸ್.ಈಶ್ವರಪ್ಪ ಭೇಟಿ – ಅಮಿತ್ ಶಾ ಮನಸ್ಸಿಗೆ ನೋವಾಗಿರಬಹುದು : ಬಿ.ವೈ.ರಾಘವೇಂದ್ರ
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಏ. ೫: ಕೆ.ಎಸ್.ಈಶ್ವರಪ್ಪರ ಷರತ್ತುಗಳಿಂದ ಅಮಿತ್ ಶಾ ಮನಸ್ಸಿಗೆ ನೋವಾಗಿರಬಹುದು ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಗುರುವಾರ ಬೆಳಿಗ್ಗೆ ಶಿವಮೊಗ್ಗದ ವಿನೋಬನಗರದಲ್ಲಿನ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಅಮಿತ್ ಶಾ ಅವರು ವಜ್ರದಷ್ಟೆ ಗಟ್ಟಿಯಿರುವ ಹಾಗೂ ನಿಲುವುಗಳಲ್ಲಿ ಸ್ಪಷ್ಟತೆಯಿರುವ ವ್ಯಕ್ತಿತ್ವದವರಾಗಿದ್ದಾರೆ. ಅವರನ್ನು ಆಧುನಿಕ ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದೇ ಕರೆಯಲಾಗುತ್ತದೆ. ಅವರ ನೇತೃತ್ವದಲ್ಲಿ ರಾಷ್ಟ್ರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರಗಳು ಸ್ಪಷ್ಟವಾಗಿ ಕಾರ್ಯಗತಗೊಂಡಿವೆ.ಇಂತಹ ವ್ಯಕ್ತಿತ್ವದ ಅಮಿತ್ ಶಾ ಅವರು ಕೆ.ಎಸ್.ಈಶ್ವರಪ್ಪರನ್ನು ತಮ್ಮ ಬಳಿ ಕರೆಯಿಸಿಕೊಂಡಿದ್ದರಿಂದ ಸಮಾಧಾನವಾಗಿತ್ತು. ಪರಿಸ್ಥಿತಿ ತಿಳಿಯಾಗುವ ವಿಶ್ವಾಸ ತಮ್ಮದಾಗಿತ್ತು ಎಂದರು.ಆದರೆ ಈಶ್ವರಪ್ಪರು ಕಂಡೀಷನ್ ಹಾಕಿದ್ದು, ಪತ್ರಿಕಾಗೋಷ್ಠಿ ಮೂಲಕ ಹೇಳಿ ಹೋಗುವ ಪ್ರಯತ್ನ ಮಾಡಿದ್ದು ಅಮಿತ್ ಶಾ ಅವರಿಗೆ ತಲುಪಿರಬಹುದು. ಈ ಕಾರಣದಿಂದ ಈಶ್ವರಪ್ಪರಿಗೆ ಅವರ ಭೇಟಿ ಸಾಧ್ಯವಾಗದಿರಬಹುದು ಎಂಬುವುದು ಎಂದು ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.