ಜೀವನದಲ್ಲಿನ ಒತ್ತಡ ಆರೋಗ್ಯಕಾರಿಯಾಗಿ ನಿರ್ವಹಿಸಬೇಕು: ಡಾ.ಎಚ್ ಹೇಮಾವತಿ ಸಲಹೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೫: ಪ್ರತಿಯೊಬ್ಬರು ಜೀವನದಲ್ಲಿನ ಒತ್ತಡವನ್ನ ಬಹಳ ಆರೋಗ್ಯಕಾರಿಯಾಗಿ ನಿರ್ವಹಿಸಬೇಕು ಎಂದು ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಚ್. ಹೇಮಾವತಿ ತಿಳಿಸಿದರು.ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ  ನಡೆದ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಮಾನಸಿಕ ಒತ್ತಡ- ನಿಭಾಯಿಸುವ ಸುಲಭ ಸೂತ್ರಗಳು… ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಕೆಲವರು ಸಾಮಾನ್ಯವಾಗಿ ಒತ್ತಡವನ್ನು ಅನಾರೋಗ್ಯಕಾರಿಯಾಗಿ ನಿರ್ವಹಣೆ ಮಾಡುವುದು ಕಂಡು ಬರುತ್ತದೆ. ಅದು ಸಲ್ಲದು ಎಂದರು.ಆರೋಗ್ಯವಂತರಲ್ಲಿ ದೇಹ ಮತ್ತು ಮನಸ್ಸು ಎರಡೂ ಸಮತೋಲಿತವಾಗಿರುತ್ತವೆ.ಕೆಲವೊಮ್ಮೆ ವಿವಿಧ ಕಾರಣ ಗಳಿಂದ ಸಮತೋಲನ ಏರುಪೇರಾಗುತ್ತದೆ. ಸಮತೋಲವನ್ನ ಮತ್ತೆ ತರುವ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿನಲ್ಲಿ ಆಗುವಂತಹ ಬದಲಾವಣೆಯನ್ನೇ ಒತ್ತಡ ಎನ್ನಲಾಗುತ್ತದೆ ಎಂದು ತಿಳಿಸಿದರು.ದೈಹಿಕ ಕಾಯಿಲೆ, ಎದುರಾಗುವಂತಹ ಸಂಕಷ್ಟಗಳಿಂದ ಒತ್ತಡ ಉಂಟಾಗುತ್ತದೆ. ನಾನಾ ರೀತಿಯ ನೋವು, ಸುಸ್ತು, ನಿದ್ರಾಹೀನತೆ, ಹಸಿವು ಕಡಿಮೆ ಆಗುವುದು, ಮನದಲ್ಲಿನ ಇನ್ನಿಲ್ಲದ ಭಯ, ಆತಂಕ, ದುಃಖ, ಏಕಾಗ್ರತೆ ಕಡಿಮೆ ಆಗುವುದರ ಮೂಲಕ ಒತ್ತಡವು ಪ್ರಕಟವಾಗುತ್ತದೆ ಎಂದು ತಿಳಿಸಿದರು.ಅನೇಕರು ಒತ್ತಡವನ್ನು ಅನಾರೋಗ್ಯಕಾರಿಯಾಗಿ ನಿರ್ವಹಿಸುತ್ತಾರೆ. ಸಮಸ್ಯೆಯಿದ್ದರೂ ಒಪ್ಪಿಕೊಳ್ಳದೇ ಇರುವುದು ಸಮಸ್ಯೆಯೇ ಇಲ್ಲ ಅಂದುಕೊಳ್ಳುವುದು. ಇತರರ ಮೇಲೆ ದೋಷ ಹೊರಿಸುವುದು. ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯ, ಧೂಮಪಾನ ಮಾಡುವ ಮೂಲಕ ಒತ್ತಡ ನಿಯಂತ್ರಣ ಮಾಡಲು ಮುಂದಾಗುತ್ತಾರೆ. ಇಂತಹವು ಒತ್ತಡ ನಿರ್ವಹಣೆಯಲ್ಲಿ ನಿರೀಕ್ಷಿತ ಪರಿಣಾಮ ಉಂಟು ಮಾಡುವುದಿಲ್ಲ. ಬದಲಿಗೆ ಇನ್ನೂ ಒತ್ತಡವನ್ನು ಇನ್ನೂ ಹೆಚ್ಚಳ ಮಾಡುತ್ತವೆ ಎಂದು ಎಚ್ಚರಿಸಿದರು.ಇರುವಂತಹ ಸಮಸ್ಯೆಯನ್ನ ಇದೆ ಎಂದು ಒಪ್ಪಿಕೊಳ್ಳುವುದು. ಸಮಸ್ಯೆ, ಅದರ ಸೂಕ್ತ ಪರಿಹಾರೋಪಾಯದ ಜವಾಬ್ದಾರಿ ತಾವೇ ಹೊತ್ತುಕೊಳ್ಳುವುದು. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು. ಸಮಸ್ಯೆ, ಪರಿಹಾರ ಕುರಿತಂತೆ ಆಪ್ತರು, ಬಂಧು-ಬಳಗದವರಲ್ಲಿ ಚರ್ಚಿಸುವುದು. ಸಮಸ್ಯೆ ಪರಿಹಾರಕ್ಕೆ ಕೈ ಗೊಂಡ ಪ್ರಯತ್ನದ ಫಲಾಫಲದ ಬಗ್ಗೆ ತಿಳಿಯುವುದು ಮತ್ತು ಯಾವ ರೀತಿ ಮುಂದೆ ನಡೆಯಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದು ತಿಳಿಸಿದರು.ಒತ್ತಡ ನಿರ್ವಹಣೆ ನಿಟ್ಟಿನಲ್ಲಿ ಸಕರಾತ್ಮಕವಾಗಿ ಯೋಚಿಸುವುದು. ಭಾವನೆಗಳ ಮೇಲೆ ನಿಯಂತ್ರಣ ಸಾಽಸು ವುದು. ಆತಂಕ ನಿವಾರಣೆಗಾಗಿ ಧ್ಯಾನ, ಯೋಗ, ಸಾಧ್ಯವಾದಂತಹ ಹವ್ಯಾಸಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವುದು. ಆಟೋಟ, ಸಂಗೀತ, ನೃತ್ಯ, ಛಾಯಾಗ್ರಾಹಣ, ಮನೆಯಲ್ಲೇ ತೋಟಗಾರಿಕೆ, ಸಮಾಜ ಸೇವೆ ಯಲ್ಲಿ ತೊಡಗಿಸಿಕೊಳ್ಳುವಿಕೆ ಜೊತೆಗೆ ಅಗತ್ಯ ಬಿದ್ದಲ್ಲಿ ಮನೋವೈದ್ಯರಲ್ಲಿ ಆಪ್ತ ಸಮಾಲೋಚನೆ ಪಡೆಯಬೇಕು ಎಂದು ತಿಳಿಸಿದರು.ಕೇಂದ್ರದ ನಿರ್ದೇಶಕ ಡಾ.ಜಿ. ಗುರುಪ್ರಸಾದ್, ಡಾ.ರೇವಪ್ಪ, ಡಾ.ಎ.ಎಸ್. ಮೃತ್ಯುಂಜಯ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಸಿ.ಎಂ. ಅಂಜಲಿ ಇತರರು ಇದ್ದರು