ಶ್ರೀಮಂತ ಕನ್ನಡ ಭಾಷೆ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಪ್ರೊ. ಶಿವಶರಣಪ್ಪ ಮೂಳೆಗಾಂವ್
ಕಲಬುರಗಿ:ಏ.04: ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ್ ಅವರು ಹೇಳಿದರು
ನಗರದ ಶರಣಬಸವೇಶ್ವರ್ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕನ್ನಡ ಮೌಲ್ಯಮಾಪನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟವಾದ ಶಿಕ್ಷಣ ನೀಡಬೇಕು. ಉಪನ್ಯಾಸಕರು ಹೊಸದನ್ನು ಕಲಿಯಬೇಕು, ಹೊಸದನ್ನು ಕಲಿಸಬೇಕು ಹಾಗೂ ಕ್ರಿಯಾಶೀಲವಾಗಿರಬೇಕು, ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಬೆಳೆಸಬೇಕು, ಉಳಿಸಬೇಕು ಹಾಗೂ ಪೆÇೀಷಿಸಬೇಕು. ಇದು ಕನ್ನಡಿಗರ ಜವಾಬ್ದಾರಿ ಇದೆ ಎಂದರು.
ಮೌಲ್ಯಮಾಪನ ಕೇಂದ್ರದ ಮುಖ್ಯ ಪರೀಕ್ಷಕ ಚಂದ್ರಕಾಂತ್ ಬಿರಾದಾರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಇಡೀ ರಾಜ್ಯದಲ್ಲಿ ಜಿಲ್ಲೆಯ ಕನ್ನಡ ಮೌಲ್ಯಮಾಪನ ಕೇಂದ್ರ ತುಂಬಾ ಉತ್ತಮವಾಗಿ ಹಾಗೂ ಶಿಸ್ತಿನಿಂದ ಮೌಲ್ಯ ಮಾಪಕರು ಮೌಲ್ಯಮಾಪನ ಮಾಡಿದರು ಎಂದು ಶ್ಲಾಘಿಸಿದರು.
ಮೌಲ್ಯಮಾಪನ ಕೇಂದ್ರದ ವೀಕ್ಷಕ ಅರುಣ್‍ಕುಮಾರ್ ಪಾಟೀಲ್ ಅವರು ಮಾತನಾಡಿ, ಉಪನ್ಯಾಸಕರಿಗೆ ಹಾಗೂ ಪ್ರಿನ್ಸಿಪಾಲರಿಗೆ ಮೌಲ್ಯಮಾಪನ ತುಂಬಾ ಶಿಸ್ತಿನಿಂದ ಸಮಯಕ್ಕೆ ಸರಿಯಾಗಿ ಮಾಡಿದಕ್ಕೆ ಧನ್ಯವಾದಗಳು ಎಂದರು. ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಶ್ರೀಶೈಲ್ ಹೊಗಾಡೆ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳ ಪಿಯು ಕಾಲೇಜಿನ ಸೇವಾ ನಿವೃತ್ತಿಗೊಳ್ಳುತ್ತಿರುವ ಉಪನ್ಯಾಸಕರು, ಪ್ರಿನ್ಸಿಪಾಲರಾದ ಡಾ. ಗೌಸುದ್ದೀನ್ ತುಮಕೂರಕರ್, ಜಗದೀಶ್ ಬಿಜಾಪುರೆ, ವೈಜನಾಥ್ ಕಾಳೆ ಅವರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸರ್ಕಾರದಿಂದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸದಸ್ಯರಾಗಿ ನೇಮಕಗೊಂಡ ಸತ್ಯಂ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಬಿ.ಎಚ್. ನಿರಗುಡಿ ಅವರಿಗೆ ಸತ್ಕರಿಸಿದರು. ಹಾಗೂ ಕನ್ನಡ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ನಾಲ್ವರು ಉಪನ್ಯಾಸಕರಿಗೆ ಗೌರವಿಸಲಾಯಿತು. ವಿಜಯಕುಮಾರ್ ರೋಣದ್ ಅವರು ಕಾರ್ಯಕ್ರಮ ನಿರೂಪಿಸಿದರು. ಮನ್ಮಥ್ ಡೊಡೋಳೆ ಅವರು ವಂದಿಸಿದರು. 300ಕ್ಕಿಂತ ಹೆಚ್ಚು ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರು ಪಾಲ್ಗೊಂಡಿದ್ದರು.