ಮದುವೆಯಾಗುವುದಾಗಿ ನಂಬಿಸಿ 12 ಲಕ್ಷ ರೂ.ಗಳ ಪಂಗನಾಮ: ಮಹಿಳಾ ಪೇದೆ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ:ಏ.04: ಮದುವೆಯಾಗುವುದಾಗಿ ನಂಬಿಸಿ ಸುಮಾರು 12 ಲಕ್ಷ ರೂ.ಗಳನ್ನು ವಂಚನೆ ಮಾಡಿದ ಸಿಎಎನ್ ವಿಶೇಷ ಅಪರಾಧ ಪೋಲಿಸ್ ಠಾಣೆಯ ಮಹಿಳಾ ಪೋಲಿಸ್ ಪೇದೆ ಗುಂಡಮ್ಮಾ ತಂದೆ ಯಲ್ಲಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿ, ವಂಚಿಸಿದ ಹಣವನ್ನು ಮರಳಿಸುವಂತೆ ಒತ್ತಾಯಿಸಿ ವಂಚನೆಗೆ ಒಳಗಾದ ವ್ಯಕ್ತಿ ಸೇರಿ ಹಲವಾರು ಸಂಘಟನೆಗಳ ಪ್ರಮುಖರು ಗುರುವಾರ ನಗರ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಪ್ರತಿಭಟನೆಕಾರರು ನಂತರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಮಹೇಶ್ ತಂದೆ ಆನಂದರಾವ್ ಅವರಿಗೆ ಮಹಿಳಾ ಪೋಲಿಸ್ ಪೇದೆ ಮೋಸ ಮಾಡಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಗತಿಏನು?, ಕೂಡಲೇ ಪೋಲಿಸ್ ಪೇದೆಯ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಪೋಲಿಸ್ ಪೇದೆ ಗುಂಡಮ್ಮಾ ತಂದೆ ಯಲ್ಲಪ್ಪ ಅವರು ಮಹೇಶ್ ತಂದೆ ಆನಂದರಾವ್ ಅವರಿಗೆ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಲವಾರು ಗೃಹಪಯೋಗಿ ವಸ್ತುಗಳು, ಮನೆ ಕಟ್ಟಡಕ್ಕೆ ಬೇಕಾಗುವ ಸಲಕರಣೆಗಳು, ಬಂಗಾರ ಮತ್ತು ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಲಾಡ್ಜ್ ವ್ಯವಹಾರ ಮಾಡುವ ಮಹೇಶ್ ಅವರಿಗೆ ಮಹಿಳಾ ಪೋಲಿಸ್ ಪೇದೆ ಅನೇಕ ವರ್ಷಗಳಿಂದ ಪರಿಚಿತರಾಗಿದ್ದು, ಮದುವೆ ಮಾಡಿಕೊಳ್ಳುವ ಕುರಿತು ಮಹಿಳಾ ಪೋಲಿಸ್ ಪೇದೆಯೇ ಹೇಳುತ್ತಿದ್ದರು. ಮಹಿಳಾ ಪೋಲಿಸ್ ಪೇದೆಯಿಂದ ಸಂಸಾರ ಚೆನ್ನಾಗುತ್ತದೆ ಎಂದು ಭಾವಿಸಿದ ಮಹೇಶ್ ಅವರು ಮಹಿಳಾ ಪೋಲಿಸ್ ಪೇದೆ ಕೇಳಿದಂತೆ ಮನೆ ನಿರ್ಮಾಣಕ್ಕಾಗಿ ಲಾರಿಗಂಟಲೇ ಸಿಮೆಂಟ್, ಉಸುಕು, ಮನೆಗಳಿಗೆ ಬೇಕಾಗುವ ಕಟ್ಟಡ ಸಾಮಾನುಗಳು, ದ್ವಿಚಕ್ರವಾಹನ, ಟಿವಿ, ಫ್ರಿಡ್ಜ್, ಬಟ್ಟೆ, ಬರೆ, ಬಂಗಾರ, ಸೀರೆ ಮುಂತಾದವುಗಳನ್ನು ಕೊಡಿಸಿದ್ದರು ಎಂದು ಅವರು ಹೇಳಿದರು.
ಎಲ್ಲ ರೀತಿಯಿಂದಲೂ ಸಹಾಯ ಪಡೆದ ಮಹಿಳಾ ಪೋಲಿಸ್ ಪೇದೆ ಗುಂಡಮ್ಮಾ ಅವರು ಮಹೇಶ್ ಅವರ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸಿದ್ದರಿಂದ ಮಹೇಶ್ ಅವರು ಮನನೊಂದು ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೂ ಯತ್ನಿಸಿದರು. ಕಳೆದ 2022ರ ಫೆಬ್ರವರಿ 14ರಂದು ಅಶೋಕ್ ನಗರ ಪೋಲಿಸ್ ಠಾಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಅವರು ಹೋದಾಗ ಗುಂಡಮ್ಮ ಅವರೇ ಮೊಬೈಲ್ ನಂಬರ್ ಪಡೆದುಕೊಂಡು, ಕರೆ ಮಾಡಿ ಪ್ರೀತಿಸುವುದನ್ನು ಮುಂದುವರೆಸೋಣ ಎಂದು ಹೇಳುತ್ತಲೇ ಎಲ್ಲ ಸಹಾಯಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ದೂರಿದರು.
ಮದುವೆಯಾಗುವ ಬದಲು ಮಹೇಶ್ ಅವರ ವಿರುದ್ಧವೇ ಆಧಾರ ರಹಿತ ಆರೋಪ ಮಾಡಿದ್ದರಿಂದ ಮಹೇಶ್ ಅವರ ತಾಯಿ ಹಾಸಿಗೆ ಹಿಡಿದರು. ಆದ್ದರಿಂದ ಇಡೀ ಸಂಸಾರದಲ್ಲಿ ನೆಮ್ಮದಿ ಹಾಳು ಮಾಡಿ ಮಹೇಶ್ ಅವರಿಂದ 12 ಲಕ್ಷ ರೂ.ಗಳನ್ನು ವಂಚಿಸಿದ ಮಹಿಳಾ ಪೋಲಿಸ್ ಪೇದೆ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಎಂಎಸ್‍ಕೆಮಿಲ್ ಪ್ರದೇಶದ ಸಂತ್ರಸ್ತ ವ್ಯಕ್ತಿ ಮಹೇಶ್ ಆನಂದರಾವ್, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಸಚಿನ್ ಫರತಾಬಾದ್, ಅಕ್ಷಯ್, ನವೀನ್, ಸುರೇಶ್ ಬಡಿಗೇರ್, ಶಿವು ದೊಡ್ಡಮನಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.