ಉದ್ಯೋಗ ಖಾತ್ರಿಯಡಿ ಎನ್‍ಎಂಎಂಎಸ್ ಪದ್ದತಿ ರದ್ದುಪಡಿಸಲು ಮಮಶೆಟ್ಟಿ ಆಗ್ರಹ
ಕಲಬುರಗಿ:ಏ.04: ಕಲ್ಯಾಣ ಕರ್ನಾಟಕದ ತೊಗರಿ ನಾಡಿನಲ್ಲಿ ಉರಿಬಿಸಿಲು ಹೆಚ್ಚಾಗುತ್ತಿರುವುದರಿಂದ ಕೃಷಿ ಕೂಲಿಕಾರರ ಹಿತದೃಷ್ಟಿಯಿಂದ ಎನ್‍ಎಂಎಂಎಸ್ ಪದ್ದತಿ ರದ್ದುಪಡಿಸಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಕೊಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಗರಿಯ ನಾಡು ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲಿನ ತಾಪ ಮಾನ ದಿನೆ ದಿನೆ ಹೆಚ್ಚಾಗಿದೆ ಈ ವರ್ಷ ಭಿಕರ ಬರಗಾಲ ತತ್ತರಿಸಿ ಹೋಗಿದೆ. ಹೀಗಾಗಿ ಕೃಷಿ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ಒಂದೆ ಕೆಲಸದ ಬದುಕಿನುದ್ದಕ್ಕೂ ಆಸರೆಯಾಗಿದೆ. ಇಂತಹ ಉರಿ ಬಿಸಿಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಪ್ರಮಾಣದಲ್ಲಿ 3 ಸಮಯ ಅಂದರೆ 8 ತಾಸು ಬಿಸಿಲಿನಲ್ಲಿ ಕೂಡಿಸಿ ಎನ್‍ಎಂಎಂಎಸ್ ಜಾರಿಗೆ ತಂದು ಕೆಲಸ ಮಾಡಿದ ಕೂಲಿಕಾರರ ದಣಿದು ಬಿಸಿಲಿನಲ್ಲಿ ತಾಪಮಾನಕ್ಕೆ ಬಿಸಲಿನ ಝಳಕ್ಕೆ ಕೂಲಿಕಾರರ ಜಿವ ಹಿಂಡಿದಂತಾಗುತ್ತಿದೆ. ಹೀಗಾಗಿ ತಕ್ಷಣವೇ ಮೊದಲಿನಂತೆಯೇ ಯಥಾಪ್ರಕಾರ ಕೆಲಸದ ಸಮಯ ಇರಬೇಕು ಎಂದು ಆಗ್ರಹಿಸಿದರು.
ಬೇಸಿಗೆ ಕಾಲದಲ್ಲಿ ಪ್ರತಿ ವರ್ಷದಂತೆಯೆ ಈ ವರ್ಷವೂ ಕೂಡ ಬಿಸಿಲು ನಾಡಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರರಿಗೆ ಕೆಲಸದ ಪ್ರಮಾಣದಲ್ಲಿ ಕನಿಷ್ಟ ಶೇಕಡಾ 40ರಷ್ಟು ರಿಯಾಯಿತಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಬೇಸಿಗೆ ಕಾಲದಲ್ಲಿ ಉರಿ ಬಿಸಿಲು ಅತಿ ಹೆಚ್ಚಾಗಿ ಇರುವುದರಿಂದ ಉದ್ಯೋಗ ಖಾತ್ರೆ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಕೆಲಸದ ಸಮಯ ಬೆಳಿಗ್ಗೆ 6 ರಿಂದ 11 ಗಂಟೆಯವರೆಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲೆಯ ಬಿಸಿಲು ತಾಪಮಾನ ಹೆಚ್ಚಾಗಿದ್ದು ಬೆಳಿಗ್ಗೆ ಕೆಲಸಕ್ಕೆ ಹೋದ ಕೂಲಿಕಾರರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಬಿಸಿಲಿನಲ್ಲಿ ಕೂಡಿಸಿ ಎನ್‍ಎಂಎಂಎಸ್ ಹಾಜರಿ ಪಡೆಯುವುದು ಒಂದು ಘೋರ ಅನ್ಯಾಯ ಮಾಡಿದಂತಾಗುತ್ತದೆ. ಕೂಲಿಕಾರರ ಹಿತದೃಷ್ಟಿಯಿಂದ ಕೂಡಲೇ ಆ ಪದ್ದತಿ ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸದ ಪ್ರಮಾಣ ಕನಿಷ್ಟ ಶೇಕಡಾ 40ರಷ್ಟು ಸಹಾಯಧನ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಹ ಕಾರ್ಯದರ್ಶಿಗಳಾದ ದಿಲೀಪ್ ನಾಗೂರೆ, ರಾಯಪ್ಪ ಹುರುಮುಂಜಿ, ಅನಿಲಕುಮಾರ್ ಗುತ್ತೇದಾರ್ ಅವರು ಉಪಸ್ಥಿತರಿದ್ದರು.