ಸೆ.೨೧-೨೨ ರಂದು ದೃಶ್ಯಕಲಾ ಮಹಾವಿದ್ಯಾಲಯದಲ್ಲಿ‌ ವಜ್ರ ಮಹೋತ್ಸವ ಸಮಾರಂಭ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೯: ದಾವಣಗೆರೆ ಕಲಾ ಶಾಲೆಯ  ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ ದಾವಣಗೆರೆ ಇವರ ಸಹಯೋಗದಲ್ಲಿ ಇದೇ  ಸೆ.೨೧ ಮತ್ತು ೨೨ ರಂದು  ಶಾಲೆಯ ಆವರಣದಲ್ಲಿ  ಶಾಲೆಯ ೬೦ನೇ ವರ್ಷದ ವಜ್ರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಹೋತ್ಸವ ಸಮಿತಿ ಅಧ್ಯಕ್ಷ ಚಿ.ಸೂ.ಕೃಷ್ಣ ಸೆಟ್ಟಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೨೧ರ ಬೆಳಿಗ್ಗೆ ೯.೩೦ಕ್ಕೆ ಜಾನಪದ ತಂಡಗಳೊಂದಿಗೆ ಮೆರವಣಿಗೆ, ಶೋಭಾಯಾತ್ರೆ ನಡೆಯಲಿದೆ.೧೧.೩೦ ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ಸ್ಮರಣ ಸಂಚಿಕೆ ಮತ್ತು ಕಲಾಕೃತಿಗಳ ಕ್ಯಾಟಲಾಗ್ ಬಿಡುಗಡೆ, ಕಲಶ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ವಿವಿ ಕುಲಪತಿ ಬಿ.ಡಿ.ಕುಂಬಾರ ಆಗಮಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ದಾಕಹವಿಸದ ಸದಸ್ಯರುಗಳಿಂದ ಕಾಲೇಜಿನ ಅನುಭವಗಳ ಮೆಲುಕು ಕಾರ್ಯಕ್ರಮ ಹಾಗೂ ಸಂಜೆ ೪.೩೦ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಸೆ.೨೨ ರಂದು ಬೆಳಿಗ್ಗೆ ೯ ಗಂಟೆಗೆ ಶಾಲೆಯ ಆವರಣದಲ್ಲಿ‌ ೬೦ ಬ್ಯಾಚ್ಗಳ ಹಳೆಯ ವಿದ್ಯಾರ್ಥಿಗಳಿಂದ ೬೦ ಸಸಿ ನೆಡುವ ಕಾರ್ಯಕ್ರಮ, ೧೦ ಗಂಟೆಗೆ ಕಲಾ ಪ್ರಾತ್ಯಕ್ಷಿಕೆಗಳು, ಮಧ್ಯಾಹ್ನ ೧೨ ಕ್ಕೆ ದೃಶ್ಯ ಪ್ರಸ್ತುತಿ, 3 ಕ್ಕೆ ಕಾಲೇಜಿನ ಅನುಭವಗಳ ನೆನಪು, ಸಂಜೆ ೪.೩೦ ಕ್ಕೆ ಸಮಾರೋಪ ನಡೆಯಲಿದೆ. ಸೆ.೨೦ ರಿಂದ ೨೨ರ ವರೆಗೆ ೩ ದಿನಗಳ ಕಾಲ ರಾಜ್ಯ ಮಟ್ಟದ ಕಲಾವಿದರ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಹೋತ್ಸವ ಸಮಿತಿಯ ಗಣಪತಿ ಎಸ್.ಹೆಗಡೆ,ಮಹಾಂತೇಶ್ ಹರ್ತಿ, ಸುರೇಶ್ ಎಸ್. ವಾಘ್ಮೋರೆ ಇದ್ದರು.