ವಿಕಸಿತ ಭಾರತ ಸಾಧಿಸಲು ಸಮರ್ಥ ನೀರಿನ ನಿರ್ವಹಣೆ ಮುಖ್ಯ:ಪ್ರೊ. ಅಂಜಲ್ ಪ್ರಕಾಶ್
ಕಲಬುರಗಿ:ಸೆ.19:”ವಿಕಸಿತ ಭಾರತವನ್ನು ಸಾಧಿಸಲು ಸಮರ್ಥ ನೀರಿನ ನಿರ್ವಹಣೆ ಮುಖ್ಯವಾಗಿದೆ” ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISಃ) ಹೈದರಾಬಾದನ ಪ್ರೊ. ಅಂಜಲ್ ಪ್ರಕಾಶ್ ಹೇಳಿದರು.
ಅವರು ನವದೆಹಲಿಯ ಐಸಿಎಸ್‍ಎಸ್‍ಆರ್ ಸಹಯೋಗದಲ್ಲಿ ಸಿಯುಕೆ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಆಯೋಜಿಸಿದ್ದ ವಿಕಸಿತ ಭಾರತ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಭಾರತೀಯರು ನೀರಿನ ನಿರ್ವಹಣೆಯ ಅಹರ್-ಪೈನ್ ವ್ಯವಸ್ಥೆಯನ್ನು ಚೆನ್ನಾಗಿ ತಿಳಿದಿದ್ದರು. ಈ ವ್ಯವಸ್ಥೆಯಲ್ಲಿ ನದಿ ನೀರನ್ನು ಭವಿಷ್ಯದ ಬಳಕೆಗಾಗಿ ಕೆರೆ, ಕೊಳಗಳಲ್ಲಿ ಸಂಗ್ರಹಿಸಲಾಗುತ್ತದೆ. ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಅಹರ್-ಪೈನ್ ವ್ಯವಸ್ಥೆಯನ್ನು ಹೊಂದಿತ್ತು ಮತ್ತು ಅವು ಸ್ಥಳೀಯ ಸ್ಥಿತಿಗೆ ಮತ್ತು ಪರಿಸರ ವ್ಯವಸ್ಥೆಗೆ ತಕ್ಕಂತೆ ಇದ್ದವು. ಆಧುನಿಕ ನೀರು ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರೊಂದಿಗೆ ನಾವು ಸುಸ್ಥಿರ ಸಾಂಪ್ರದಾಯಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ ಮತ್ತು ಇದು ನದಿಯ ಹರಿವು ಮತ್ತು ಪ್ರವಾಹದಲ್ಲಿ ಬದಲಾವಣೆಗೆ ಕಾರಣವಾಗಿದೆ” ಎಂದು ಹೇಳಿದರು.
ನದಿಗಳು ಮತ್ತು ಇತರ ಜಲಮೂಲಗಳ ಮಾಲಿನ್ಯದ ಬಗ್ಗೆ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿ ಮಾತನಾಡಿ “2014 ರಿಂದ ಇಂದಿನವರೆಗೆ ನಾವು ಗಂಗಾ ನದಿಯನ್ನು ಸ್ವಚ್ಛಗೊಳಿಸಲು 32 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ, ಆದರೆ ಅದು ಪೂರ್ಣಗೊಂಡಿಲ್ಲ. ಆದರೂ ನಾವು ನೀರನ್ನು ಕುಡಿಯಲು ಅಥವಾ ಗೃಹಬಳಕೆಗೆ ಬಳಸುವಂತಿಲ್ಲ. ನಾವು ನಮ್ಮ ನದಿಗಳನ್ನು ಎಷ್ಟು ಕಲುಷಿತಗೊಳಿಸಿದ್ದೇವೆ ಎಂದರೆ ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಅದರ ಪರಿಣಾಮಗಳನ್ನು ಊಹಿಸಲು ಸಾಧ್ಯವಿಲ್ಲ. ನಾವು ಸುಸ್ಥಿರ ಉತ್ಪಾದನಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳದಿದ್ದರೆ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ತರದಿದ್ದರೆ ಭವಿಷ್ಯವು ತುಂಬಾ ಭಯಾನಕವಾಗಿರುತ್ತದೆ. ಆದ್ದರಿಂದ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಬೇಕು ಮತ್ತು ಮಾಲಿನ್ಯಕಾರಕ ಚಟುವಟಿಕೆಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು” ಎಂದು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಪ್ರಸ್ತುತ ನಮ್ಮ ತಲಾ ಆದಾಯ 2485 ಡಾಲರ್ ಆಗಿದೆ. ವಿಕಸಿತ ಭಾರತ ಆಗಬೇಕಾದರೆ ಅದು 6-7 ಪಟ್ಟು ಹೆಚ್ಚಾಗಬೇಕು. ವಿಕಸಿತ ಭಾರತ ಆಗಲು ತಲಾ ಆದಾಯದ ಹೆಚ್ಚಳದ ಜೊತೆಗೆ ಭಾರತೀಯ ಆರ್ಥಿಕತೆಯು ಬಲಿಷ್ಠವಾಗಿರಬೇಕು, ಚೇತರಿಸಿಕೊಳ್ಳಬೇಕು, ನಾವೀನ್ಯತೆಗಳಿಂದ ನಡೆಸಲ್ಪಡಬೇಕು, ಸ್ವಚ್ಛ ಮತ್ತು ಹಸಿರುಮಯವಾಗಬೇಕು, ಸಂಪನ್ಮೂಲಗಳ ಅತ್ಯುತ್ತಮ ಬಳಕೆಯಾಗಬೇಕು, ಹೆಚ್ಚು ಒಳಗೊಳ್ಳುವಿಕೆಯ ಮತ್ತು ಸಾಮರಸ್ಯದ ಸಾಮಾಜಿಕ ವ್ಯವಸ್ಥೆ ಬರಬೇಕು, ಜನರು ಹೆಚ್ಚು ಉತ್ಪಾದಕವಾಗಿ, ಆರೋಗ್ಯಕರ ಮತ್ತು ಶ್ರೀಮಂತರಾಗಿರಬೇಕು” ಎಂದು ಅವರು ಹೇಳಿದರು.
ವಿಕಸಿತ ಭಾರತವನ್ನು ಹೇಗೆ ಸಾಧಿಸುವುದು ಮತ್ತು ನಾವು ಎದುರಿಸಬೇಕಾದ ಸವಾಲುಗಳ ಕುರಿತು ಮಾತನಾಡಿದ ಅವರು, “ನಾವು ನಮ್ಮ ಆರ್ಥಿಕತೆಯಲ್ಲಿ ರಚನಾತ್ಮಕ ರೂಪಾಂತರವನ್ನು ತರಬೇಕಾಗಿದೆ. ಗ್ರಾಮೀಣ ಮತ್ತು ದುರ್ಬಲ ವರ್ಗದವರ ಆದಾಯ ಹೆಚ್ಚಾಗಬೇಕು. ಉತ್ಪಾದನಾ ವಲಯದಿಂದ ಆದಾಯ ಮತ್ತು ಉದ್ಯೋಗದ ಪಾಲು ಹೆಚ್ಚಾಗಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೌಶಲ್ಯ ಅಭಿವೃದ್ಧಿಯು ಶೇಕಡಾ 75 ರಷ್ಟಿದೆ ಆದರೆ ಭಾರತದಲ್ಲಿ ಅದು ಕೇವಲ ಶೇಕಡಾ 5 ರಷ್ಟಿದೆ ಇದು ಬದಲಾಗಬೇಕು. ನಾವು ನಿರುದ್ಯೋಗವನ್ನು ಕಡಿಮೆ ಮಾಡಬೇಕು 2014ರಲ್ಲಿ ಶೇ.16 ಇದ್ದದ್ದು ಈಗ ಶೇ.24 ಆಗಿದೆ. ಬಡತನ ಮತ್ತು ಅಸಮಾನತೆ ಕಡಿಮೆಯಾಗಬೇಕು. ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ ಮತ್ತೊಂದು ಸವಾಲಾಗಿದೆ. ಅಗ್ರ ಶೇಕಡಾ ಒಂದರಷ್ಟು ಜನರು ರಾಷ್ಟ್ರೀಯ ಸಂಪತ್ತಿನ 40 ಪ್ರತಿಶತವನ್ನು ಹೊಂದಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಜಿಡಿಪಿಯ 7 ಪ್ರತಿಶತವನ್ನು ಖರ್ಚು ಮಾಡುತ್ತವೆ, ಆದರೆ ನಾವು ಕೇವಲ ಎರಡು ಪ್ರತಿಶತವನ್ನು ಮಾತ್ರ ಖರ್ಚು ಮಾಡುತ್ತಿದ್ದೇವೆ. ನಮ್ಮ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. 5 ನೇ ತರಗತಿಯ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ 2 ನೇ ತರಗತಿಯ ಪಠ್ಯವನ್ನು ಓದಲು ಮತ್ತು ಬರೆಯಲು ಬರುವುದಿಲ್ಲ. ಲಿಂಗ ಅಸಮಾನತೆಯನ್ನು ಕಡಿಮೆ ಮಾಡಬೇಕು ಮತ್ತು ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು. ಮೇಲಿನ ಸಮಸ್ಯೆಗಳ ಜೊತೆಗೆ ಪರಿಸರ ಸುಸ್ಥಿರತೆ ಕೂಡ ಬಹಳ ಮುಖ್ಯ. ಹವಾಮಾನ ಬದಲಾವಣೆ, ತಾಪಮಾನದಲ್ಲಿನ ಹೆಚ್ಚಳ ಮತ್ತು ಅನಿಯಮಿತ ಮಳೆಯಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ನಾವು ನಮ್ಮ ಜಿಡಿಪಿಯ 159 ಬಿಲಿಯನ್ ಡಾಲರ್‍ಗಳನ್ನು ಕಳೆದುಕೊಂಡಿದ್ದೇವೆ” ಎಂದು ಹೇಳಿದರು.
ಡೀನ್ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್, ಪೆÇ್ರ.ಕೆ ಪದ್ಮಶ್ರೀ, ವಿಚಾರ ಸಂಕಿರಣದ ಸಂಚಾಲಕ ಡಾ.ಎಸ್.ಲಿಂಗಮೂರ್ತಿ, ಡಾ.ಸುಮಾ ಸ್ಕಾರಿಯಾ, ಡಾ.ಬಸವರಾಜ ಎಂ.ಎಸ್., ಡಾ.ಶಿವಕುಮಾರ್ ಬೆಳ್ಳಿ ವೇದಿಕೆಯಲ್ಲಿದ್ದರು. ಪ್ರತಿನಿಧಿಗಳು, ಸಂಪನ್ಮೂಲ ವ್ಯಕ್ತಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.