‘ನವ ಬೌದ್ಧಯಾನ’ ಕೃತಿ ಲೋಕಾರ್ಪಣೆ: ನೂತನ ಸಂಸದರಿಗೆ ಸನ್ಮಾನ :ಸಂವಿಧಾನದ ಆಶಯ ಈಡೇರಿಕೆಗೆ ಪ್ರಾಮಾಣಿಕ ಶ್ರಮ ಅಗತ್ಯ
ಕಲಬುರಗಿ:ಸೆ.19: ತೀವ್ರ ಅನಾರೋಗ್ಯದ ಮಧ್ಯೆಯೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತರು ಹಾಗೂ ದಲಿತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇಡೀ ಜಗತ್ತು ಒಪ್ಪುವಂತಹ ಸಂವಿಧಾನವನ್ನು ರಚಿಸಿದರು. ಅವರು ಅಷ್ಟೊಂದು ನೋವು ಸಹಿಸಿಕೊಂಡು ಪರಿಶ್ರಮದಿಂದ ರಚಿಸಿದ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಯೋಜನಾ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ.ಚಂದ್ರಶೇಖರಯ್ಯ ಕಿವಿಮಾತು ಹೇಳಿದರು.
ಮಹಾಬೋಧಿ ಪ್ರಕಾಶನ, ಮಹೇಂದ್ರ ಫೌಂಡೇಷನ್ ವತಿಯಿಂದ ಸೋಮವಾರ ಸಂಜೆ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ‘ನವ ಬೌದ್ಧಯಾನ’ ಕೃತಿ ಲೋಕಾರ್ಪಣೆ ಹಾಗೂ ನೂತನ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ತೀವ್ರ ಸ್ವರೂಪದ ಅನಾರೋಗ್ಯದ ಮಧ್ಯೆಯೂ ಅವರು ‘ಬುದ್ಧ ಆಂಡ್ ಹಿಸ್ ಧಮ್ಮ’ ಕೃತಿಯ ಹಸ್ತಪ್ರತಿಯನ್ನು ಪೂರ್ಣಗೊಳಿಸಿದ ಬಳಿಕವೇ ಕೊನೆಯುಸಿರೆಳೆದರು. ಬಾಬಾಸಾಹೇಬರಲ್ಲಿದ್ದ ಇಂತಹ ಕರ್ತೃತ್ವ ಶಕ್ತಿ ಹಾಗೂ ಬದ್ಧತೆಯನ್ನು ಶೋಷಿತ ಸಮುದಾಯಗಳ ಹೊಸ ತಲೆಮಾರಿನ ಯುವಕರು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಭಾಗದಲ್ಲಿರುವ ಪ್ರತಿ ಸಮುದಾಯ ಭವನವನ್ನು ಬುದ್ಧ ಮಂದಿರಗಳಾಗಿ ಪರಿವರ್ತಿಸುವ ಅಗತ್ಯವಿದೆ. ಈ ಬುದ್ಧ ಮಂದಿರಗಳಲ್ಲಿ ನಿತ್ಯ ಬೌದ್ಧ ಸಂಸ್ಕಾರ ಹಾಗೂ ಬುದ್ಧ ವಂದನೆ ನಡೆಯುವಂತೆ ಶೋಷಿತ ಸಮುದಾಯದ ಯುವಕರು ಹೊಣೆಗಾರಿಕೆ ನಿಭಾಯಿಸಬೇಕಿದೆ ಎಂದರು.
ಬೆಂಗಳೂರಿನ ಭಂತೇಜಿ ಸುಗತಪಾಲ ಅವರು ದಿವ್ಯ ಸಾನ್ನಿಧ್ಯ ಹಾಗೂ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭವನ್ನು ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಉದ್ಘಾಟಿಸಿ, ಕೃತಿ ಲೋಕಾರ್ಪಣೆಗೊಳಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಅವರು ನವ ಬೌದ್ಧಯಾನ ಕೃತಿಯ ಕುರಿತು ಮಾತನಾಡುತ್ತಾ, ರಾಜ್ಯದ ವಿವಿಧೆಡಗಳಲ್ಲಿ ನೆಲೆಸಿರುವ ಲೇಖಕರು ಹಾಗೂ ಪ್ರಗತಿಪರ ಚಿಂತಕರು ಈ ಕೃತಿಯಲ್ಲಿ ಬೌದ್ಧ ಧರ್ಮದ ಕುರಿತು ತಮ್ಮ ಲೇಖನಗಳನ್ನು ಬರೆದಿದ್ದಾರೆ. ಬೌದ್ಧ ಧರ್ಮದ ಆಳ ಮತ್ತು ಅಗಲವನ್ನು ಅರ್ಥ ಮಾಡಿಕೊಳ್ಳಬಯಸುವವರು ಈ ಕೃತಿಯನ್ನು ತಪ್ಪದೆ ಓದಬೇಕೆಂದು ಸಲಹೆ ನೀಡಿದರು.
ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ ಎಂ.ಎಸ್ ಅವರಿಗೆ ಸಮಾರಂಭದಲ್ಲಿ ವಿಶೇಷ ಗೌರವ ಸನ್ಮಾನ ಕೈಗೊಳ್ಳಲಾಯಿತು.
ದಿವ್ಯ ಸಾನ್ನಿಧ್ಯ ಹಾಗೂ ಅಧ್ಯಕ್ಷತೆ ವಹಿಸಿದ್ದ ಭಂತೇಜಿ ಸುಗತಪಾಲ ಅವರು ಬುದ್ಧ ವಂದನೆ ಸಲ್ಲಿಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಸುಭಾಷ್ ಎಲ್.ಶಿಕ್ಷಣಕರ್, ಕೆ.ಎಸ್.ಅಭಿಮನ್ಯು, ಸಿಪಿಐ ವಿಠ್ಠಲ ಚಿತ್ತಕೋಟೆ, ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ್, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಅರವಿಂದ ಕಟ್ಟಿ, ಶಿಕ್ಷಣ ಕ್ಷೇತ್ರದ ಶಿವಾನಂದ ಖಜುರ್ಗಿ, ಶಂಶುದ್ದೀನ್ ಪಟೇಲ್, ಬಿ.ಎಸ್.ಮಾಲಿ ಪಾಟೀಲ್, ರವೀಂದ್ರ ಸಜ್ಜಿ, ಎಚ್.ಬಿ.ಪಾಟೀಲ್, ಗೀತಾ ಭರಣಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಜಿಪಂ. ಮಾಜಿ ಸದಸ್ಯ ಭೀಮರಾವ್ ಟಿ.ಟಿ., ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಉದ್ಯಮಿ ಪ್ರಭುದೇವ ಪಾಟೀಲ್, ಮಾಜಿ ಮಹಾಪೌರ ದಶರಥ ಬಾಬು ಒಂಟಿ, ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಡಿಎ ಮಾಜಿ ಅಧ್ಯಕ್ಷ ಶಾಮ್ ನಾಟೇಕಾರ್, ಕೆಕೆಆರ್‍ಟಿಸಿ ಡೆಪ್ಯುಟಿ ಕಂಟ್ರೋಲರ್ ಈಶ್ವರ ಹೊಸಮನಿ, ಕಲಬುರಗಿ ದಕ್ಷಿಣ ವಲಯದ ಬಿಇಒ ವಿಜಯಕುಮಾರ ಜಮಖಂಡಿ, ಡಾ.ಕೆ.ಎಸ್.ಬಂಧು, ಸಾಹಿತಿ ಬಿ.ಎಚ್.ನಿರಗುಡಿ, ನಾಗನಗೌಡ ಪಾಟೀಲ್, ವಿಜಯ ಕಾಂಬಳೆ, ಯಶವಂತ ಶಿಂಧೆ, ಶಶಿಕಾಂತ ಹೋಳ್ಕರ್, ಈಶ್ವರ ಇಂಗನ್, ದೇವನಗೌಡ ಪಾಟೀಲ್, ಸುಜಾತಾ ಎಸ್.ಬಿರಾದಾರ, ದಶವಂತ ಗಾಜರೆ ಹಾಗೂ ದಯಾನಂದ ಹೊನ್ನಶೆಟ್ಟಿ, ಡಾ.ಕೃಷ್ಣಮೂರ್ತಿ, ಜ್ಯೋತಿ ಚಂದ್ರಶೇಖರ ದೊಡ್ಡಮನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಡಾ.ಸುರೇಶ ಎಲ್.ಶರ್ಮಾ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಆರಂಭದಲ್ಲಿ ಎನ್.ಎಸ್.ಎಸ್. ಡಾ.ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಶೋಕ ತಳಕೇರಿ ಸ್ವಾಗತಿಸಿದರು. ಸತೀಶ್ ಸಜ್ಜನ್ ಹಾಗೂ ಶರಣಬಸವ ಹೆಗ್ಗಡೆ ವೇದಿಕೆಯ ಚಟುವಟಿಕೆಗಳನ್ನು ನಿರ್ವಹಿಸಿದರು.
ಮಹೇಶ್ ಕುಲಕರ್ಣಿ ನಿರೂಪಿಸಿದರು. ಉಪನ್ಯಾಸಕಿ ಜಮುನಾ ಟಿಳೆ ವಂದಿಸಿದರು.