ಕಾರಾಗೃಹದ ಮಹಿಳಾ ಸಿಬ್ಬಂದಿಯಿಂದಲೇ ಗಾಂಜಾ ಸರಬರಾಜು !
ಕಲಬುರಗಿ,ಸೆ.19-ಇಲ್ಲಿನ ಕೇಂದ್ರ ಕಾರಾಗೃಹದ ಮಹಿಳಾ ಸಿಬ್ಬಂದಿಯೊಬ್ಬರು ಕದ್ದು ಮುಚ್ಚಿ ಕಾರಾಗೃಹದೊಳಗೆ ಗಾಂಜಾ ಸರಬರಾಜು ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.
ಕಾರಾಗೃಹದ ಗ್ರೂಪ್ ಡಿ ಸಿಬ್ಬಂದಿ ಪದ್ಮಾವತಿ ದೇವೇಂದ್ರಪ್ಪ ಹೊಸಮನಿ ಎಂಬುವವರೆ ಕಾರಾಗೃಹದೊಳಗೆ ಕದ್ದುಮುಚ್ಚಿ ಗಾಂಜಾ ಸರಬರಾಜು ಮಾಡುತ್ತಿದ್ದ ವೇಳೆ ಕಾರಾಗೃಹದ ಪೊಲೀಸ್ ಸಿಬ್ಬಂದಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
ಪದ್ಮಾವತಿ ಅವರು ಕರವಸ್ತ್ರದಲ್ಲಿ ಉಂಡೆಯ ಆಕಾರದ ಅನುಮಾನಾಸ್ಪದ ವಸ್ತುವನ್ನು ಸುತ್ತಿಕೊಂಡು ಬಂದಿದ್ದನ್ನು ಗಮನಿಸಿದ ಕಾರಾಗೃಹದ ಪೊಲೀಸ್ ಸಿಬ್ಬಂದಿ ಅವರ ಹ್ಯಾಂಡ್‍ಬ್ಯಾಗನ್ನು ಪರಿಶೀಲಸಿದಾಗ ಅದರಲ್ಲಿ 60-70 ಗ್ರಾಂ.ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಕಾರಾಗೃಹದ ಮುಖ್ಯ ಪ್ರಭಾರ ಅಧೀಕ್ಷಕ ಸುರೇಶ ಬಿ.ಅವರು ಕಾರಾಗೃಹದ ವಾರ್ಡರ್ ನಾಗಪ್ಪ ಮಡ್ನಳ್ಳಿ ಅವರ ಮೂಲಕ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.