ಬಸ್ ಹತ್ತುವಾಗ ಮಂಗಳಸೂತ್ರ ಕಳವು: ಇಬ್ಬರು ಕಳ್ಳಿಯರ ಬಂಧನ
ಕಲಬುರಗಿ,ಏ.4-ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಮಂಗಳಸೂತ್ರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳಿಯರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಡಬರಾಬಾದನ ಕ್ರಾಸ್‍ನ ಕವಿತಾ ಅಲಿಯಾಸ್ ಹಸೀನಾ ತೋಹಿದ್ ಶೇಖ್ (45) ಮತ್ತು ಸಕೀನಾ ತೋಹಿದ್ ಶೇಖ್ (20) ಎಂಬುವವರನ್ನು ಬಂಧಿಸಿ 2.20 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ಮಂಗಳಸೂತ್ರ ಜಪ್ತಿ ಮಾಡಿದ್ದಾರೆ.
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಭೀಮಬಾಯಿ ಪ್ರಶಾಂತ ಮಡ್ಡಿತೋಟ ಅವರು ಸಂಬಂಧಿಕರ ವಿವಾಹ ಸಮಾರಂಭಕ್ಕೆಂದು ಕಲಬುರಗಿಗೆ ಬಂದು ವಿವಾಹ ಸಮಾರಂಭ ಮುಗಿಸಿಕೊಂಡು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ ಊರಿಗೆ ಹೋಗಲು ಬಸ್ ಹತ್ತುತ್ತಿದ್ದ ವೇಳೆ ವ್ಯಾನಿಟಿ ಬ್ಯಾಗ್‍ನಲ್ಲಿಟ್ಟಿದ್ದ 2.20 ಲಕ್ಷ ರೂ.ಮೌಲ್ಯದ 40 ಗ್ರಾಂ.ಮಂಗಳಸೂತ್ರ ಕಳವಾಗಿತ್ತು. ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ವಿ.ಎಸ್.ಅವರ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆ ಪಿಐ ಮಹಾಂತೇಶ ಕೆ.ಬಸಾಪೂರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವೈಜನಾಥ, ಗುರುಮೂರ್ತಿ, ಶಿವಲಿಂಗ, ನೀಲಕಂಠರಾಯ, ಚಂದ್ರಶೇಖರ, ಕು.ಲಕ್ಷ್ಮೀ, ಕು.ವಿಜಯಲಕ್ಷ್ಮೀ, ಮತ್ತು ಕು.ಅನುಜಾ ಅವರು ತನಿಖೆ ನಡೆಸಿ ಇಬ್ಬರು ಕಳ್ಳಿಯರನ್ನು ಬಂಧಿಸಿ ಮಂಗಳಸೂತ್ರ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.