ಡ್ರಾಪ್ ಕೊಡುವ ನೆಪದಲ್ಲಿ 80 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ,ಏ.4-ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ 80 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಹಾಗರಗುಂಡಗಿ ಕ್ರಾಸ್ ಹತ್ತಿರದ ಬ್ರಿಜ್ ಬಳಿ ನಡೆದಿದೆ.
ಮೈನಾಳ ಗ್ರಾಮದ ಈರಮ್ಮ ಶೇಖಪ್ಪ ತಳವಾರ (50) ಮತ್ತು ಅವರ ಮಗಳು ಮಂಜುಳಾ ಶ್ರೀಶೈಲ್ (30) ಅವರು ಮೈನಾಳ ಗ್ರಾಮದಿಂದ ಹಾಗರಗುಂಡಗಿಗೆ ಬಂದು ಕೆಜಿಬಿ ಬ್ಯಾಂಕಿನಿಂದ ಈರಮ್ಮ ಅವರು 5 ಸಾವಿರ ರೂ, ಮಂಜುಳಾ ಅವರು 2,500 ರೂ.ಡ್ರಾ ಮಾಡಿಕೊಂಡು ಮೈನಾಳ ಗ್ರಾಮಕ್ಕೆ ಹೋಗಲೆಂದು ಹಾಗರಗುಂಡಗಿ ಕ್ರಾಸ್ ಹತ್ತಿರ ಬಸ್ಸಿಗಾಗಿ ಕಾಯುತ್ತ ನಿಂತಿದ್ದಾರೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಕಾರು ಬಂದಿದೆ. ಕಾರಿನ ಹಿಂದುಗಡೆ ಸೀಟಿನಲ್ಲಿ ಮೂವರು ಮಹಿಳೆಯರಿದ್ದರು ಎನ್ನಲಾಗಿದೆ. ಕಾರು ಚಾಲಕ ಇವರನ್ನು ನೋಡಿ ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿ ಅದೇ ಮಾರ್ಗವಾಗಿ ಹೋಗುತ್ತಿದ್ದು, ಮೈನಾಳ ಗ್ರಾಮದವರೆಗೆ ಬಿಡುವುದಾಗಿ ಹೇಳಿ ತಾಯಿ-ಮಗಳನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಕಾರು ಸ್ವಲ್ಪ ದೂರ ಹೋದ ಮೇಲೆ ಕಾರಿನಲ್ಲಿ ಜಾಗ ಕಡಿಮೆಯಾಗಿ ಇಕ್ಕಟ್ಟಾಗುತ್ತಿದೆ ಇಳಿಯಿರಿ ಎಂದು ತಾಯಿ ಮಗಳನ್ನು ನಡು ರಸ್ತೆಯಲ್ಲಿಯೇ ಇಳಿಸಿದ್ದಾನೆ. ಆಗ ಈರಮ್ಮ ಅವರು ತಮ್ಮ ಕೊರಳಲ್ಲಿನ ಬಂಗಾರದ ಆಭರಣ ನೋಡಿಕೊಂಡಿದ್ದು, ಅವು ಕಳವಾಗಿದ್ದು ಅವರ ಗಮನಕ್ಕೆ ಬಂದಿದೆ.
ಡ್ರಾಪ್ ಕೊಡುವ ನೆಪದಲ್ಲಿ 40 ಸಾವಿರ ರೂ.ಮೌಲ್ಯದ 1 ತೊಲೆ ಬಂಗಾರದ ಬೋರಮಳ ಮತ್ತು 40 ಸಾವಿರ ರೂ.ಮೌಲ್ಯದ ತಾಳಿ ಸರ ಸೇರಿ 80 ಸಾವಿರ ರೂ.ಮೌಲ್ಯದ ಚಿನ್ನಾಭರಣ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಅವರು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.