ಕಾಲುವೆಗಳ ಕ್ಲೋಜರ್ ಕಾಮಗಾರಿ ಆರಂಭಿಸಲು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯ
ವಿಜಯಪುರ: ಏ.4:ಕಾಲುವೆಗಳ ಕ್ಲೋಜರ್ ಕಾಮಗಾರಿ ನಡೆಸಲು ನೀತಿ ಸಂಹಿತೆಯಿಂಧ ವಿನಾಯಿತಿ ನೀಡಿ ಕಾಮಗಾರಿಗೆ ಅನುಮತಿ ನೀಡಬೇಕೆಂದು ಜಿಲ್ಲಾ ಆಡಳಿತ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಲಾಲ್ ಬಹದ್ಧೂರ್ ಶಾಸ್ತ್ರಿ ಜಲಾಶಾಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳಲ್ಲಿ ಬೆಳೆದಿರುವ ಮುಳ್ಳು ಕಂಟಿಗಳು ಇನ್ನಿತರ ಗಿಡಗಂಟಿಗಳು ಹಾಗೂ ಹೂಳು ತುಂಬಿರುವುದರಿಂದ ಪ್ರತಿ ಬಾರಿಯು ಕಾಲುವೆಗಳಿಗೆ ನೀರು ಹರಿಸಿದಾಗ ಕಾಲುವೆ ಕೊನೆಯ ಅಂಚಿನವರೆಗೆ ನೀರು ತಲುಪದೆ ಕೊನೆಯ ಭಾಗದ ರೈತರು ನೀರಿನಿಂದ ವಂಚಿತರಾಗುತ್ತಾರೆ. ಕಳೆದ ವರ್ಷವು ಕೂಡಾ ವಿವಿಧ ಕಾಲುವೆಗಳ ದುರಸ್ತಿಯ ಕ್ಲೋಜÀರ್ ಕಾಮಗಾರಿಯನ್ನು ಅನುದಾನದ ಕೊರತೆಯಿಂದ ಕಾಮಗಾರಿ ಮಾಡಲಿಲ್ಲ. ಈ ಬಾರಿಯೂ ಕೂಡಾ ಕ್ಲೋಜರ್ ಕಾಮಗಾರಿ ಪ್ರಾರಂಭಿಸುವುದು ಅನುಮಾನವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾಮಗಾರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆಯೆಂದು ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನೀತಿ ಸಂಹಿತೆ ಮುಗಿಯುವುದರೊಳಗಾಗಿ ಮಳೆಗಾಲ ಆರಂಭವಾಗುತ್ತದೆ. ಇದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ ಎಪ್ರಿಲ್‍ನಲ್ಲಿ ಟೆಂಡರ್ ಕರೆದು ಜೂನ್ ವೇಳೆಗೆ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ ಈ ಸದ್ಯದ ಪರಿಸ್ಥಿತಿ ಗಮನಿಸಿದರೆ ಈ ವರ್ಷವೂ ಕ್ಲೋಸರ್ ಕಾಮಗಾರಿ ನಡೆಯುವುದು ಅನುಮಾನವಾಗಿದೆ. ಮೇಲಾಗಿ ಚುನಾವಣಾ ನೀತಿ ಸಂಹಿತೆಯ ನೆಪ ಬೇರೆ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಕಾಲುವೆಯ ಕ್ಲೋಜರ್ ಕಾಮಗಾರಿಗೆ ನೀತಿ ಸಂಹಿತೆಯಿಂದ ಚುನಾವಣಾ ಆಯೋಗ ವಿನಾಯಿತಿ ನೀಡಬೇಕು ಅವರು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹೋರಾಟಗಾರರಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಳಿಕೋಟೆ ತಾಲೂಕು. ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ಹೊನಕೇರಪ್ಪ ತೆಲಗಿ, ಶೆಟ್ಟಪ್ಪ ಲಮಾಣಿ, ಪ್ರಲ್ಹಾದ ನಾಗರಾಳ, ವಿಠ್ಠಲ ಬಿರಾದಾರ, ರಾಮಣ್ಣಗೌಡ ಹಾದಿಮನಿ, ಶಿವಣ್ಣಗೌಡ ತುಳಸಗೇರಿ, ಮಲ್ಲಣ್ಣಗೌಡ ದೇವರೆಡ್ಡಿ, ಲಾಲಸಾಬ ಹಳ್ಳೂರ ಮುಂತಾದವರು ಇದ್ದರು.