ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿನಾಳೆ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ ರೈತ ಮುಖಂಡರು
ಅಫಜಲಪುರ:ಏ.4: ಸೊನ್ನ ಅಣೆಕಟ್ಟಿನಿಂದ ಭೀಮಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 18 ದಿನಗಳಿಂದ ತಾಲೂಕಿನ ಗುಡ್ಡೇವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಭೀಮಾ ನದಿಯಲ್ಲಿ ರೈತರು ಹಗಲು ರಾತ್ರಿ ಎನ್ನದೇ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ ಅಫಜಲಪುರ ಹಾಗೂ
ತಾಲೂಕಾ ಜಲಸಮಿತಿಗಳ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಪ್ರತಿ ಬಾರಿ ರೈತರ ಹೆಸರು ಹೇಳಿಕೊಂಡೆ ಅಧಿಕಾರಕ್ಕೆ ಬರುವ ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ನಂತರ ರೈತರ ಹಿತಾಸಕ್ತಿಯನ್ನೇ ಮರೆತು ಬಿಡುತ್ತಾರೆ. ಈಗಾಗಲೇ ಬರಗಾಲದಿಂದ ಬಳಲಿ ಬೆಂಡಾಗಿರುವ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ನಾರಾಯಣಪುರ ಜಲಾಶಯದಿಂದ ಸೊನ್ನ ಆಣೆಕಟ್ಟಿಗೆ 1 ಟಿಎಂಸಿ ನೀರು ಹರಿಸಲಾಗಿದೆ. ಆದರೆ ಸೊನ್ನ ಅಣೆಕಟ್ಟಿನಿಂದ ಭೀಮಾ ನದಿಗೆ ನೀರು ಹರಿಸದ ಕಾರಣ ನದಿ ಪಾತ್ರದ ಗ್ರಾಮೀಣ ಭಾಗದ ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಅಲ್ಲದೆ ಭೀಮಾ ನದಿಯಲ್ಲಿ ನೀರಿಲ್ಲದ ಕಾರಣ ಅಕ್ರಮ ಮರಳು ದಂಧೆಕೋರರು ಮರಳು ಸಾಗಾಟ ಮಾಡುತ್ತಿದ್ದಾರೆ. ಇದರಿಂದ ಭೀಮಾನದಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕಳೆದ 18 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ಕೈಗೊಂಡರೂ ಸಹ ಇಲ್ಲಿವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ ನಾಳೆ ಶುಕ್ರವಾರ 11 ಗಂಟೆಗೆ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸುಮಾರು 500 ಜನ ರೈತರು ಕೂಡಿಕೊಂಡು ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಸ್ಥಳಕ್ಕೆ ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಆಗಮಿಸಿ ಭೀಮಾ ನದಿಗೆ ನೀರು ಹರಿಸುವ ಭರವಸೆ ನೀಡಿದಾಗ ಮಾತ್ರ ನಮ್ಮ ಹೋರಾಟ ಕೈ ಬಿಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಲ ಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ದು ದಣ್ಣೂರ, ಅಶೋಕ ಹೂಗಾರ, ಯಲ್ಲಾಲಿಂಗ ನೆಲೋಗಿ, ದತ್ತುಗೌಡ ಪೆÇಲೀಸ ಪಾಟೀಲ, ಮಾಳಪ್ಪ ಪೂಜಾರಿ, ಜಗು ತೇಲಕರ, ಶರಣಪ್ಪ ಮ್ಯಾಕೇರಿ,
ಗೌಡಪ್ಪಗೌಡ ಪಾಟೀಲ, ರುಕ್ಮೊದ್ದೀನ್ ಮುಲ್ಲಾ,
ಅರ್ಜುನ ಕುಂಬಾರ, ಮಹಾಲಿಂಗ ಮಹಾಲಿಂಗಪುರ,
ಯಸಾವಂತರಾಯಗೌಡ ಹರನಾಳ, ಶರಣಗೌಡ ಪಾಟೀಲ, ಶಿವರಾಜ ಕೆರಕನಳ್ಳಿ, ಚಂದ್ರಶಾ ಬಿದನೂರ,
ನಾಗಯ್ಯ ಆಕಾಶಮಠ, ಗುರುಪಾದಯ್ಯ ಮೇಗಿನಮಠ,
ಸಿದ್ದಪ್ಪ ಗುಡೇದ, ಶಿವಕಾಂತ ಸಿಂಗೆ, ದತ್ತುಗೌಡ ಪಾಟೀಲ, ಬಸವರಾಜ ಪಾಟೀಲ ಅನೇಕರಿದ್ದರು.