ಮತದಾರರ ಅಭಿಪ್ರಾಯದಂತೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ; ಜಿ.ಬಿ ವಿನಯ್ ಕುಮಾರ್
ಸಂಜೆವಾಣಿ ವಾರ್ತೆ
ದಾವಣಗೆರೆ, ಏ.4; ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಾವು ಸ್ಪರ್ಧಿಸುವುದು ಖಚಿತ, ನಾಮಪತ್ರ ಸಲ್ಲಿಸಿದ ನಂತರ ಅದನ್ನು ವಾಪಾಸ್ಸು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಪುನರುಚ್ಛರಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸುತ್ತೇನೆ.ನಾಮಪತ್ರ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ವಾಪಾಸ್ಸು ತೆಗೆದುಕೊಳ್ಳುವುದಿಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಂದಲೂ ನನಗೆ ಫೋನ್ ಬರುತ್ತಿದೆ. ನಾನು ಈಗಾಗಲೇ ಕ್ಷೇತ್ರಾದ್ಯಂತ ಹಳ್ಳಿಹಳ್ಳಿಯಲ್ಲೂ ಸುತ್ತಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಟಿಕೆಟ್ ನನಗೆ ತಪ್ಪಿರಬಹುದು. ಆದರೆ, ನಾನು ಪಕ್ಕಾ ಕಾಂಗ್ರೆಸ್ಸಿಗ ಎಂದು ಅವರು ಹೇಳಿದರು.ಕಾಂಗ್ರೆಸ್ಸನ್ನು ಸೋಲಿಸುವುದು, ಬಿಜೆಪಿಯನ್ನು ಗೆಲ್ಲಿಸುವುದು ನನ್ನ ಗುರಿಯಂತೂ ಅಲ್ಲ. ನಾನು ಗೆಲ್ಲಬೇಕು. ಅದಕ್ಕಾಗಿ ಗೆಲ್ಲುವ ಕಡೆಗೆ ನನ್ನೆಲ್ಲಾ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದಲ್ಲಿ ನಾನು ಸಹ ಕಾಂಗ್ರೆಸ್ ಅಭ್ಯರ್ಥಿಯೆಂದೇ ಪ್ರಚಾರ ಮಾಡಿ, ಅಹಿಂದ ಮತಗಳನ್ನು ಒಟ್ಟುಗೂಡಿಸುತ್ತೇನೆ ಎಂದು ಅವರು ತಿಳಿಸಿದರು.ಎಲ್ಲಾ ಅಹಿಂದ ಮುಖಂಡರು, ಜಿಲ್ಲೆ, ರಾಜ್ಯ ಕಾಂಗ್ರೆಸ್ ಮುಖಂಡರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ನಾನು ನೂರಾರು ಹಳ್ಳಿಗಳ ಜನ ಸಾಮಾನ್ಯರು, ಮತದಾರರ ಅಭಿಪ್ರಾಯದಂತೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸಿ, ಸ್ಪರ್ಧಿಸುವುದಂತೂ ಖಚಿತ ಎಂದು ಜಿ.ಬಿ.ವಿನಯಕುಮಾರ ಸ್ಪಷ್ಟಪಡಿಸಿದರು.
—