ನಾಳೆ ಶ್ರೀಖಾಸ್ಗತ ಜಾತ್ರೋತ್ಸವ ಅಂಗವಾಗಿ ಪುರಾಣ ಪ್ರಾರಂಭ
ತಾಳಿಕೋಟೆ:ಏ.4: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಶಾಖಾ ಮಠವಾದ ಅಮಲಿಹಾಳ ಗ್ರಾಮದಲ್ಲಿಯ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇದೇ ದಿ.5 ಶುಕ್ರವಾರರಂದು ಕಲಬುರ್ಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಮಹಾ ಪುರಾಣ ಪ್ರಾರಂಭೋತ್ಸವವು ಜರುಗಲಿದೆ.
ಜಾತ್ರೋತ್ಸವ ಅಂಗವಾಗಿ ಪ್ರತಿದಿನ ಶ್ರೀ ಖಾಸ್ಗತ ಮಹಾಸ್ವಾಮಿಗಳ ಮತ್ತು ವಿರಕ್ತಶ್ರೀಗಳ ಮಹಾ ಮೂರ್ತಿಗಳಿಗೆ ನಸುಕಿನ ಜಾವ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಲಿದ್ದು ದಿ. 5ರಿಂದ ಪ್ರತಿ ದಿನ ಸಾಯಂಕಾಲ 7 ರಿಂದ 8-30ರವರೆಗೆ ಜರುಗಲಿರುವ ಕಲಬುರ್ಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಈ ಪುರಾಣ ಪ್ರವಚನವನ್ನು ವೇ.ಶ್ರೀ ಶಾಂತವೀರಯ್ಯ ಶಾಸ್ತ್ರೀಗಳು ಬಂಗಾರಿಮಠ ಅವರು ನಡೆಸಿಕೊಡಲಿದ್ದು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ವಹಿಸುವರು.
ಈ ಸಮಯದಲ್ಲಿ ಗವಾಯಿಗಳಾದ ಸಿದ್ದಯ್ಯಸ್ವಾಮಿ ಮಳಲಾಪೂರ, ಬಸನಗೌಡ ಬಿರಾದಾರ ಚೊಕ್ಕಾವಿ ಅವರು ಸೇವೆ ಸಲ್ಲಿಸುವರು.
ಏಪ್ರೀಲ್ 19 ರಂದು ಬೆಳಿಗ್ಗೆ 11 ಗಂಟೆಗೆ ಧರ್ಮ ಸಭೆ ನಡೆಯಲಿದ್ದು ಸಾಯಂಕಾಲ ಪುರಾಣ ಮಹಾ ಮಂಗಲ ಕಾರ್ಯಕ್ರಮ ಜರುಗುವದು.
ದಿ.20 ರಂದು ಸಾಯಂಕಾಲ 5 ಗಂಟೆಗೆ ಮಹಿಳೆಯರಿಂದ ಮಹಾ ರಥೋತ್ಸವ ಜರುಗಲಿದೆ. ದಿ.23 ರಂದು ರಥದ ಕಳಸ ಇಳಿಸುವದರೊಂದಿಗೆ ಜಾತ್ರೋತ್ಸವವು ಸಂಪನ್ನಗೊಳ್ಳಲಿದೆ.