ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ವಾಹನ, ಮುದ್ದೇಮಾಲು ಜಪ್ತು
ಯಾದಗಿರಿ : ಏ.4: ಅಬಕಾರಿ ದಾಳಿ ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ನೀಡಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಪ್ರಕರಣ ಸಂ.02, 2024ರ ಏಪ್ರಿಲ್ 02 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು,ಕಲಬುರಗಿ ವಿಭಾಗ ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಅವರ ಆದೇಶದಂತೆ ಮತ್ತು ಮಾನ್ಯ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ,ಶಹಾಪುರ ಅವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ರಾಮ್ ಸುಣಗಾರ್ ಅಬಕಾರಿ ನಿರೀಕ್ಷಕರು, ಸುರಪುರ ವಲಯ, ಶ್ರೀ ಮಹೇಶ ಚೌಧರಿ ಅಬಕಾರಿ ಉಪ ನಿರೀಕ್ಷಕರು, ಸುರಪುರ ವಲಯ, ಅಬಕಾರಿ ಮುಖ್ಯ ಪೇದೆಗಳಾದ ಶ್ರೀ ಸಂದೀಪ್ ನಾಯಕ್, ಶ್ರೀ ಸಂಪತ್ ಕುಮಾರ, ಶ್ರೀ ಯಮನಪ್ಪ ಹಾಗೂ ವಾಹನ ಚಾಲಕರಾದ ಶ್ರೀ ರಮೇಶ ದೇಸಾಯಿ ಸುರಪುರ ವಲಯ ಅವರ ಹುಣಸಗಿ ತಾಲೂಕಿನ ಮಂಜಲಾಪೂರ ಗ್ರಾಮದ ಕ್ರಾಸ್ನಲ್ಲಿ ರಸ್ತೆ ಗಸ್ತು ಮಾಡುತ್ತಿರುವಾಗ ಆರೋಪಿಯು ಸಮ ವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಪರಾರಿಯಾದನು ನಂತರ ಸಿಲ್ವರ್ ಬಣ್ಣದ ಸ್ಪ್ಲೆಂಡರ್ ಪ್ಲಸ್ ವಾಹನವನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆ ಕೆಎ-32 ಡಬ್ಲ್ಯೂ 5109 ಯುಳ್ಳ ದ್ವಿ ಚಕ್ರವಾಹನ ಮತ್ತು ಸದರಿ ವಾಹನದ ಮೇಲಿಟ್ಟಿದ್ದ ಬಿಳಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ ಒರಿಜಿನಲ್ ಚಾಯ್ಸ್ ವಿಸ್ಕಿ ಅಂತ ಮುದ್ರಿತ 90 ಎಂ.ಎಲ್ ನ 96 ಟೆಟ್ರಾ ಪ್ಯಾಕೆಟ್ಗಳು ಇದ್ದು (8.640 ಲೀಟರ್ ಮದ್ಯ) ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದರಿಂದ ಸದರಿ ವಾಹನ ಮತ್ತು ಮುದ್ದೇಮಾಲನ್ನು ಜಪ್ತುಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿರುತ್ತದೆ. ಆರೋಪಿ ಮತ್ತು ವಾಹನ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.