ಸಾಧಕರಾಗುವವರು ಸಜ್ಜನರ ಸಂಗ ಮಾಡಿ:ಕಾಯಕ ಯೋಗಿ ಪೂಜ್ಯಶ್ರೀ ಸಿದ್ಧರಾಮ ಶಿವಾಚಾರ್ಯರ ಹಿತೋಪದೇಶ
ಕಲಬುರಗಿ:ಏ.03:ಯಾವುದೇ ರಂಗದಲ್ಲಿ ಸಾಧನೆ ಮಾಡಬೇಕಾದರೂ ಮೊದಲು ಸಜ್ಜನರ ಸಂಗ ಮಾಡಬೇಕು ಎಂದು ಸಾಧಕರಾಗಬಯಸುವವರಿಗೆ ಕರೆ ನೀಡಿದವರು ಚಿನ್ಮಯಗಿರಿಯ ಶ್ರೀಗುರು ಮಹಾಂತೇಶ್ವರ ಮಠದ ಹಿರಿಯ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ಸಿದ್ಧರಾಮ ಶಿವಾಚಾರ್ಯರು.
ಅವರು ಮಂಗಳವಾರ 4ನೇ ದಿನದಂದು ಸಂಜೆ ಶ್ರೀ ಗುಡ್ಡಾಪೂರ ವರದಾನೇಶ್ವರಿ' ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಾ, ಸಾಧಕರು ನಿರಂತರ ಕಠಿಣ ಶ್ರಮ ಪಡಬೇಕು. ಯಾರು ಬೇಕಾದರೂ, ಯಾವ ರಂಗದಲ್ಲೂ ಸಾಧನೆ ಮಾಡಬಹುದು ಎಂದ ಅವರು, ಕಡಣಿ ಗ್ರಾಮ ಕೃಷಿ ಪ್ರಧಾನವಾಗಿದೆ. ಇಲ್ಲಿಯ ಕೃಷಿಕರು ಅಲ್ಪ ಜಮೀನಿನಲ್ಲಿ ಅಗಾಧ ಫಸಲು ಪಡೆದು ಲಾಭದಾಯಕ ಕೃಷಿ ಮಾಡಲು ಸಲಹೆ ನೀಡಿದರು. ತಮ್ಮ ಬಾಲ್ಯದ ಜೀವನ ನೆನಪಿಸಿಕೊಂಡು. ತಮ್ಮ ಆರಾಧ್ಯ ದೈವ ಗುರು ಬಂಥನಾಳದ ಸಂಗನಬಸವ ಅಪ್ಪಗಳು, ಸಜ್ಜನರ ಸಂಗ ಮಾಡಲು ನೀಡಿದ ಮೊದಲ ಹಿತೋಪದೇಶ. ನಾಲ್ಕನೇ ತರಗತಿ ಓದಿಕೊಂಡಿದ್ದ ನಾನು ಗದಗಿನ ಪುಣ್ಯಾಶ್ರಮದಲ್ಲಿ ಸಂಗೀತದಲ್ಲಿ ಸಾಧನೆ ಮಾಡುವ ಅಪೇಕ್ಷೆ ಇತ್ತು. ಆದರೆ, ಗುರುವಿನ ಆದೇಶದಂತೆ ಪುರಾಣ ಪ್ರವಚನ ಕಲಿತೆ. ಶತಕಗಳು ಹೇಳುವುದು, ವಚನಗಳು ಪಠಣ ಮಾಡಿದೆ. ಗೊಬ್ಬೂರಿನ ಖ್ಯಾತ ಗವಾಯಿ ಚನ್ನವೀರ ಅವರನ್ನು ಕರೆಯಿಸಿ ಸಂಗೀತ ಕಲಿಸಿಕೊಟ್ಟರು. ಗೊಬ್ಬೂರಿನ ಭೋಜರಾಯ ಪಾಟೀಲರಂತೂ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ನಾಡಿನಾದ್ಯಂತ ಪಸರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಮುಕ್ತ ಕಂಠದಿಂದ ಪ್ರಶಂಶಿಸಿದರು. ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಮೇಲ್ನೋಟಕ್ಕೆ ಒಂದು ಅರ್ಥ ಕೊಡುತ್ತವೆ. ಒಳ ಅರ್ಥವೇ ವಿಭಿನ್ನವಾಗಿರುತ್ತವೆ ಎನ್ನುವುದಕ್ಕೆಈ ಊರ ಗೌಡ ಎಂಥ ಕಳ್ಳನವ್ವ, ಈ ಊರ ಗೌಡ ಎಂಥ ಸುಳ್ಳನವ್ವ..’ ಅವರು ಹೇಳಿದ್ದು ಈ ಊರಲ್ಲ, ಬಾಹ್ಯ ಪ್ರಪಂಚದ ಊರಲ್ಲ. ದೇಹ ಎಂಬುದು ಪುರ, ಅದರೊಳಗೆ ವಾಸವಾಗಿರುವ ಜೀವಾತ್ಮ ಕಳ್ಳ. ದೇಹದೊಳಗೆ ಪಂಚೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳನ್ನಿರಿಸಿದಕ್ಕಾಗಿ ಜೀವಾತ್ಮನನ್ನು ಕಳ್ಳನೆಂದು ಕರೆಯುತ್ತಾರೆ ಎಂದು ಗೀತೆ ಮರ್ಮ ತೆರೆದಿಟ್ಟರು.
ಅಣ್ಣ ಬಸವಣ್ಣನವರು ಗಂಗಾಂಭಿಕೆ ಮತ್ತು ನೀಲಾಂಭಿಕೆ ಇಬ್ಬರನ್ನು ವರಿಸಿ ವಿವಾಹವಾದರು. ಎಲ್ಲರಂತೆ ಪ್ರಪಂಚದಲ್ಲಿದ್ದುಕೊಂಡು, ಪಾರಮಾರ್ಥ ಸಾಧನೆ ಮಾಡುತ್ತಾರೆ. ಸಾಧಕರೂ ಎಲ್ಲಿದ್ದರೂ ಸಾಧನೆ ಮಾಡಬಹುದು ಎಂಬುದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರ ನಿರ್ಮೂಲನಾ ದಳದ ರಾಜ್ಯ ಅಧ್ಯಕ್ಷ ಡಾ. ಎಸ್.ಎಸ್. ಭದ್ರಶೆಟ್ಟಿಯವರಿಗೆ `ಶಂಕರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆ ಮೇಲೆ ಶ್ರೀಮತಿ ಭದ್ರಶೆಟ್ಟಿ, ಪುತ್ರಿ ಡಾ. ಅರ್ಪಣಾ ಹಾಜರಿದ್ದರು. ವೇದಿಕೆ ಮೇಲೆ ಶರಣಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತಕೋಟಿ ಜನರು ಉಪಸ್ಥಿತರಿದ್ದರು.
ಸಂಗೀತ ಸೇವೆ ಸಿಂಧಗಿಯ ಸಂತೋಷ ಹರಸೂರಮಠ ನೇತೃತ್ವದ ಕಲಾ ಬಳಗದವರಿಂದ ನಡೆಯಿತು. ಇದೆಲ್ಲಕ್ಕೂ ನಂದೀಶ್ವರನಾಗಿ ಕುಪೇಂದ್ರ ಬಿರಾಜದಾರ ಸಾಕ್ಷಿಯಾಗಿದ್ದರು.
ಇದೇ ಸಂದರ್ಭದಲ್ಲಿ ಕಡಣಿ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಪುರಸ್ಕರಿಸಲಾಯಿತು.
ಬಸವ ಬೆಳಗಿನತ್ತ
ಲಿಂಗಮ್ಮಳ ಚಿತ್ತ
ಉಮರಾಣಿಯ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳ ಮಡಿಲಲ್ಲಿ ಬೆಳೆದ ಲಿಂಗಮ್ಮ, ಸಂಸ್ಕøತಿ, ಸಂಸ್ಕಾರದಲ್ಲಿ ಮಿಂದೆದ್ದ ಅಪ್ಪಟ ಚಿನ್ನವೇ ಆಗಿರುತ್ತಾಳೆ. ಅದೇ ಕಾಲಕ್ಕೆ ಕಲ್ಯಾಣದಲ್ಲಿ ಅಣ್ಣ ಬಸವಣ್ಣನವರ ಸಾರಥ್ಯದಲ್ಲಿ ಶರಣ ಸಂಸ್ಕ್ರತಿಯ ಕೀರ್ತಿ ಜಗದಗಲಕ್ಕೂ, ಮುಗಿಲಗಲಕ್ಕೂ ಪಸರಿಸುತ್ತಿರುತ್ತದೆ. ಸಹಜವಾಗಿಯೇ ಭಕ್ತಿವಂತರ ಗರಡಿ ಮನೆಯಲ್ಲಿ ಪಳಗಿದ ಲಿಂಗಮ್ಮ ಬಸವ ಬೆಳಗಿನತ್ತ ಚಿತ್ತ ಹರಿಸುತ್ತಾಳೆ ಎಂದರು ಪುರಾಣ ಹೇಳುತ್ತಿರುವ ಪೂಜ್ಯಶ್ರೀ ವೀರ ಮಹಾಂತೇಶ್ವರ ಶಿವಾಚಾರ್ಯರು.