ಗ್ಯಾರಂಟಿ ಯೋಜನೆಗಳ ಬಗ್ಗೆ ತಪ್ಪು ಸಂದೇಶ : ಗೀತಾ ಶಿವರಾಜಕುಮಾರ್

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಏ. ೪: ಗ್ಯಾರಂಟಿ ಯೋಜನೆಗಳಿಂದ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಕೆಲವರು ತಪ್ಪು ಸಂದೇಶ ಹರಡುತ್ತಿದ್ದಾರೆ. ಈ ರೀತಿಯ ವದಾಂತಿಗಳಿಗೆ ಜನರು ಕಿವಿಕೊಡಕೂಡದು. ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಹಸನಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಪಡವಗೋಡು ಗ್ರಾಮ ಪಂಚಾಯಿತಿ ಲಿಂಗದಹಳ್ಳಿ ಹಾಗೂ ಭೀಮನೇರಿಯ ಸೂರನಗದ್ದೆ ದೇವಸ್ಥಾನ ವೃತ್ತದಲ್ಲಿ ಬುಧವಾರ ಆಯೋಜಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಗ್ರಾಮೀಣ ಕೃಪಾಂಕ ಕಲ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಶಕ್ತ ಕುಟುಂಬಗಳಿಗೆ ಆಶಾಕಿರಣ ಆಗಿದ್ದರು. ಅವರ ಮಗಳಾದ ನಾನು ಕೂಡ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗುತ್ತೇನೆ‌. ನೊಂದವರ ಕಣ್ಣೀರು ಒರೆಸುತ್ತೇನೆ ಎಂದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾವು ಹೆಚ್ಚಾಗಿದೆ.  ಆದ್ದರಿಂದ, ಇಲ್ಲಿ ಗೀತಾ ಶಿವರಾಜಕುಮಾರ್ ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು. ಗೀತಾ ಶಿವರಾಜಕುಮಾರ್ ಅವರು ರಾಜಕೀಯಕ್ಕೆ ಬರಲು ಹಕ್ಕಿದೆ. ಅವರ ರಕ್ತದಲ್ಲಿಯೇ ಸಾಮಾಜಿಕ ಸೇವೆಯ ಗುಣವಿದೆ. ಆದರೆ, ಈ ಬಗ್ಗೆ ಕೆಲವರು ಟೀಕಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಮತ ನೀಡಿ ಹರಿಸಬೇಕು ಎಂದು ಕೋರಿದರು.ನಟ ಶಿವರಾಜಕುಮಾರ್ ಮಾತನಾಡಿ,  ಮತ ನೀಡಿ ಎಂದು ಮನೆ ಬಾಗಿಲಿಗೆ ಬಂದಿದ್ದೇವೆ. ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.