ಮಹಿಳೆಯರಿಗೆ ಅಪಮಾನ ಮಾಡುವಂತಹ ಜಾಹೀರಾತು ಬಳಕೆ: ಕೂಡಲೇ ರದ್ದು ಪಡಿಸಲು ಸಿಪಿಐ(ಎಂ) ಆಗ್ರಹ
ಕಲಬುರಗಿ,ಏ.3-ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಮಹಿಳೆಯರಿಗೆ ಅಪಮಾನ ಮಾಡುವಂತಹ ಜಾಹೀರಾತು ಬಳಸಿದ್ದು, ಕೂಡಲೇ ಈ ಜಾಹೀರಾತನ್ನು ರದ್ದುಪಡಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅವರು, ದೇಶದ ಮಹಿಳೆಯರನ್ನು ಅಪಮಾನಗೊಳಿಸಿದ ಮತ್ತು ಮಹಿಳೆಯರ ಆಯ್ಕೆಯ ಹಕ್ಕಿನ ಮೇಲೆ ದಾಳಿ ಮಾಡಿರುವ ಬಿಜೆಪಿ ಮೇಲೆ ಚುನಾವಣಾ ಆಯೋಗ ಕಾನೂನು ಕ್ರಜ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಮದುವೆಯು ಸಂಪೂರ್ಣ ವೈಯಕ್ತಿಕವಾದ ಸಾಂಸ್ಕøತಿಕ ವಿಷಯವಾಗಿದೆ. ಆದರೆ ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿರುವ ಜಾಹೀರಾತಿನಲ್ಲಿ ಒಬ್ಬ ವಧುವಿಗೋಸ್ಕರ ಎಲ್ಲರೂ ಕಿತ್ತಾಡುವ ದೃಶ್ಯವನ್ನು ವರ್ಣರಂಜಿತವಾಗಿ ತೋರಿಸಿ ಮಹಿಳೆಯ ಅಸ್ತಿತ್ವ, ಅಸ್ಮಿತೆಗೆ ಧಕ್ಕೆಯುಂಟು ಮಾಡಿದೆ. ಇಂತಹ ಮಹಿಳಾ ವಿರೋಧಿ ಮತ್ತು ಸಂವಿಧಾನ ಮೌಲ್ಯದ ವಿರೋಧಿ ಜಾಹೀರಾತನ್ನು ಬಳಕೆ ಮಾಡುವುದರ ಮೂಲಕ ಬಿಜೆಪಿ ತಾನೊಂದು ಮಹಿಳಾ ವಿರೋಧಿ, ಜನವಿರೋಧಿ ಪಕ್ಷ ಎಂಬುವುದನ್ನು ಜಾಹೀರುಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗ ಕೂಡಲೇ ಈ ಜಾಹೀರಾತನ್ನು ರದ್ದು ಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಡಾ.ಮೀನಾಕ್ಷಿ ಬಾಳಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.