ನಕಲಿ ಬಂದೂಕು ಹಿಡಿದು ರೀಲ್ಸ್ : ವಿದ್ಯಾರ್ಥಿ ಸೇರಿ ಇಬ್ಬರು ವಶಕ್ಕೆ
ಕಲಬುರಗಿ,ಏ.3-ನಕಲಿ ಬಂದೂಕು ಹಿಡಿದುಕೊಂಡು ವಿವಿಧ ತರಹದ ರೀಲ್ಸ್‍ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದಲ್ಲದೇ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿದ ಆರೋಪದ ಮೇಲೆ ವಿದ್ಯಾರ್ಥಿ ಸೇರಿ ಇಬ್ಬರನ್ನು ವಾಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಾಡಿಯ ಮಹಮ್ಮದ ಅಫಜಲೇಖ್ ತಂದೆ ಮಹಮ್ಮದ್ ಇರ್ಫಾನ್ (27) ಮತ್ತು ದೀಪಕ್ ತಂದೆ ಲಾಲು ಚವ್ಹಾಣ್ (23) (ವಿದ್ಯಾರ್ಥಿ) ಎಂಬುವವರನ್ನು ವಶಕ್ಕೆ ಪಡೆದು ನಕಲಿ ಬಂದೂಕುಗಳನ್ನು ಜಪ್ತಿ ಮಾಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಸ್ ಸೆಲ್ ಎಂಬ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದ್ದು, ಇಬ್ಬರು ಸಿಬ್ಬಂದಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯಲ್ಲಿ ಆಯುಧಗಳನ್ನು ಹಿಡಿದುಕೊಂಡು ರೀಲ್ಸ್‍ಗಳನ್ನು ಮಾಡುವುದಾಗಲಿ, ಕತ್ತಿ, ಮಚ್ಚು, ಲಾಂಗ್ ಹಿಡಿದು ಕೇಕ್ ಕತ್ತರಿಸುವುದಾಗಲಿ ಅಥವಾ ಯಾವುದೇ ರೀತಿಯ ಆಯುಧಗಳನ್ನು ಪ್ರದರ್ಶಿಸುವುದನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಉಲ್ಲಂಘನೆ ಮಾಡಿದ್ದು ಕಂಡು ಬಂದರೆ ಅಂತಹವರನ್ನು ಗುರುತಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಾಡಿ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.