ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಎಸ್‍ಎಫ್‍ಐ ಒತ್ತಾಯ
ಕಲಬುರಗಿ,ಏ.3-ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 42-43 ಡಿಗ್ರಿ ಸೆಲ್ಸಿಯಸ್ ಇದ್ದು, ಜನ-ಜಾನುವಾರು ತತ್ತರಿಸುವಂತಾಗಿದೆ. ಜಿಲ್ಲೆಯ ಅನೇಕ ಐಟಿಐ ಕಾಲೇಜುಗಳ ವರ್ಕ್‍ಶಾಪ್‍ಗಳು ಟಿನ್ (ಪತ್ರಸ್) ನಿಂದ ನಿರ್ಮಿಸಿರುವುದರಿಂದ ಭಾರೀ ಶಕೆಯಿಂದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂರಲು ಆಗುತ್ತಿಲ್ಲ. ಈ ಕೂಡಲೇ ಟಿನ್ ಇರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಅನೇಕ ಕಾಲೇಜುಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ. ಕೆಲ ಕಾಲೇಜುಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಸಹ ಇಲ್ಲ. ಇದರಿಂದ ಕಾಲೇಜಿಗೆ ಹೋಗಲು ಪರದಾಡುವಂತಾಗಿದೆ. ಆದ್ದರಿಂದ ಸಮಯಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, ಕೂಡಲೇ ಕಾಲೇಜುವಾರು ಸಮಸ್ಯೆಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್‍ಎಫ್‍ಐ ಜಿಲ್ಲಾ ಸಂಚಾಲಕಿ ಸುಜಾತ್ ವೈ, ಜಿಲ್ಲಾ ಸಹ ಸಂಚಾಲಕರಾದ ದರ್ಶನ್, ಅಭಿಷೇಕ, ಸಿದ್ದು, ಅಜಯ್ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.