ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಂತಸ
ಕಲಬುರಗಿ,ಸೆ.19: ಮಂಗಳವಾರ ಕಲಬುರಗಿ ನಗರದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಗರದಲ್ಲಿ ಪ್ರತ್ಯೇಕ ಆರಂಭಿಸುವ ನಿರ್ಧಾರ ಕೈಗೊಂಡಿರುವ ರಾಜ್ಯ ಸರಕಾರದ ಕ್ರಮಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಸಂತಸ ವ್ಯಕ್ತಪಡಿಸಿದರು.
ಶರಣ ಬಸವ ವಿಶ್ವವಿದ್ಯಾಲಯದಲ್ಲಿರುವ ಕಾರ್ಯದರ್ಶಿಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕಲಬುರಗಿ ನಗರದಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸುವಂತೆ ಸಮಿತಿ ವತಿಯಿಂದ ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿತ್ತು. ಸಮಿತಿಯ ಹೋರಾಟದ ಫಲವಾಗಿ ಈಗ ಕಲಬುರಗಿ ನಗರದಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸುವ ನಿರ್ಧಾರ ಕೈಗೊಂಡಿರುವುದು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಜನರಲ್ಲಿ ಸಮಾಧಾನ ಮೂಡಿಸಿದೆ ಎಂದರು.
ಸಂವಿಧಾನದ 371(ಜೆ) ಅನುಷ್ಠಾನಗೊಂಡು ದಶಕ ಕಳೆದಿದ್ದರೂ ಪರಿಣಾಮಕಾರಿಯಾಗಿ ಯೋಜನೆಗಳು ಕಾರ್ಯಗತಗೊಳ್ಳುವುದು ವಿಳಂಬವಾಗುತ್ತಿತ್ತು. ಇದೀಗ ಸಚಿವಾಲಯ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಯೋಜನೆಗಳು ಕಾಲಮಿತಿಯಲ್ಲಿ ಜಾರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತ್ಯೇಕ ಸಚಿವಾಲಯ ಆರಂಭವಾಗುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಪರಿಸರ ಹಾಗೂ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ, ರೆಹಮಾನ್ ಖಾನ್, ಶಿವರಾಜ ತಂಗಡಗಿ ಸೇರಿದಂತೆ ಈ ಭಾಗದ ಎಲ್ಲ ಸಚಿವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸಚಿವಾಲಯ ಆರಂಭಗೊಳ್ಳಲು ಕಾರಣರಾಗಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಕಾಲಮಿತಿಗೆ ಒತ್ತಾಯ:
ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಗೊಳಿಸುವ ಕೆಲಸ ಕಾಲಮಿತಿಯಲ್ಲಿ ಆಗಬೇಕು. ಮುಂದಿನ ಎಂಟು ದಿನಗಳಿಂದ ಒಂದು ತಿಂಗಳೊಳಗೆ ಸಚಿವಾಲಯ ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿಸಿದರು.
ಮತ್ತೊಂದೆಡೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ) ಅನುದಾನ ಬಳಸಿಕೊಳ್ಳುವ ಪ್ರವೃತ್ತಿ ಅನುಸರಿಸುತ್ತಾ, ರಾಜ್ಯ ಬಜೆಟ್ ಮೂಲಕ ಹಣ ಒದಗಿಸದೆ ಇರುವುದು ವಿಷಾದನೀಯ ಎಂದರಲ್ಲದೆ, ಕೆಕೆಆರ್ ಡಿಬಿ ಅನುದಾನವನ್ನು ಕೇವಲ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದು ಸಲಹೆ ನೀಡಿದರು.
ಕಾಲಮಿತಿಯಲ್ಲಿ ಸಚಿವಾಲಯ ಆರಂಭಿಸಬೇಕು ಹಾಗೂ ಕೆಕೆ.ಆರ್.ಡಿ.ಬಿ ಅನುದಾನದ ಬಳಕೆಗೆ ಮಾರ್ಗಸೂಚಿ ಹೊರಡಿಸಬೇಕು ಎಂದು ಒತ್ತಾಯಿಸಿ ಈ ನಿಟ್ಟಿನಲ್ಲಿ ಈ ಭಾಗದ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸಲು ಸಮಿತಿ ವತಿಯಿಂದ ಬೃಹತ್ ಹೋರಾಟ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ಡಾ.ಬಸವರಾಜ ಗುಲಶೆಟ್ಟಿ, ಡಾ.ಮಾಜಿದ್ ದಾಗಿ, ಮನಿಷ್ ಜಾಜು ಇದ್ದರು.
ಯುಕೆಪಿ ಕೇಂದ್ರ ಸರಕಾರ ವಹಿಸಿಕೊಳ್ಳಲಿ:
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371 ಜೆ ಅಡಿ ವಿಶೇಷ ಸ್ಥಾನಮಾನ ಲಭಿಸಿ ಒಂದು ದಶಕ ಕಳೆದರೂ ಕೇಂದ್ರ ಸರಕಾರ ಇದುವರೆಗೆ ನಯಾಪೈಸೆ ನೀಡಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲಗೊಂಡಿದೆ. ನರ್ಮದಾ ನೀರಾವರಿ ಯೋಜನೆ ವಹಿಸಿಕೊಂಡಂತೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸಹ ತಾನೇ ಪಡೆದು ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮ ಯತ್ನಕ್ಕೆ ಹುಡಗಿ ಶ್ಲಾಘನೆ:
ಕಲಬುರಗಿ ನಗರದಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸುವ ರಾಜ್ಯ ಸರಕಾರದ ನಿರ್ಧಾರದ ಹಿಂದೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ದಶಕದ ಹೋರಾಟದ ಜೊತೆಗೆ ಮಾಧ್ಯಮದ ಪಾತ್ರವೂ ಸಾಕಷ್ಟಿದೆ ಎಂದು ಸಮಿತಿಯ ಪೆÇ್ರ.ಆರ್.ಕೆ.ಹುಡಗಿ ಶ್ಲಾಘಿಸಿದರು.