ಸೆ. 22 ರಂದು ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ಸಮಾರೋಪ:ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ರಾಜಶೇಖರ ಶ್ರೀ
ಬೀದರ:ಸೆ.19: ಇದೇ ತಿಂಗಳ 22 ರಂದು ಪ್ರತಾಪನಗರದಲ್ಲಿನ ಬೆಲ್ದಾಳೆ ಕನ್ವೆನ್‍ಷನ್ ಹಾಲ್‍ನಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಯಶಸ್ವಿ ಅಭಿಯಾನ ಸಮಾರೋಪ ಹಾಗೂ ಶ್ರಾವಣ ಶಿವದರ್ಶನ ಸಂಚಾರ ಜೊತೆಗೆ ಶ್ರೀ ಜಗದ್ಗುರು ಪಂಚಾಚಾರ್ಯ ಪ್ರಪ್ರಥಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಬೇಮಳಖೇಡಾ ಹಿರೇಮಠ ಸಂಸ್ಥಾನ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ವಹಿಸಲಿದ್ದಾರೆ. ರಾಜ್ಯ ಸರ್ಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವ ರಹಿಂಖಾನ್ ಪಂಚಾಚಾರ್ಯ ಧ್ವಜಾರೋಹಣ ಮಾಡುವರು. ಸಂಸದ ಸಾಗರ ಖಂಡ್ರೆ ಸಿದ್ಧಾಂತ ಶಿಖಾಮಣಿ ಗೌರವ ಗ್ರಂಥ ಸಮರ್ಪಿಸುವರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(ಕೆಕೆಆರ್‍ಡಿಬಿ) ಅಧ್ಯಕ್ಷರಾದ ಡಾ. ಅಜಯಸಿಂಗ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ವಿಶ್ರಾಂತ ಅಧ್ಯಕ್ಷರಾದ ಶತಾಯುಷಿ ಡಾ. ಭೀಮಣ್ಣ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ, ವೀರಶೈವ ಸಮಾಜ ಮುಖಂಡರಾದ ಉದಗೀರದ ರಾಜೇಶ್ವರ ನಿಟ್ಟೂರೆ, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ನಿರ್ದೇಶಕ ನಿರ್ಮಾಪಕ ಡಾ. ಎಸ್.ನಾರಾಯಣ, ವಿದೇಶಿ ವಾಣಿಜ್ಯ ಯುನಿಟೈಡ್ ಕಿಂಗಡಮ್‍ನ ಬ್ರಾಡ್‍ಫೋರ್ಡ್ ಗ್ಲೋಬಲ್ ಎಂಟರಪ್ರೈಸೆಸ್‍ನ ಸಿಇಓ ಹಾಗೂ ಉದ್ಯಮಿ ಜಿ.ಟಿ.ಸುರೇಶಕುಮಾರ ಇವರಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಚಿಟಗುಪ್ಪದ ಶ್ರೀ ಗುರುಲಿಂಗ ಶಿವಾಚಾರ್ಯರು, ತಮಲೂರಿನ ಶ್ರೀ ಶಿವಾನಂದ ಶಿವಾಚಾರ್ಯರು ನೇತೃತ್ವ ವಹಿಸುವರು. ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ತಪೋರತ್ನ ಮಾತೆ ಕರುಣಾದೇವಿ ಅಕ್ಕನವರು ಸಮ್ಮುಖ ವಹಿಸುವರು ಎಂದು ತಿಳಿಸಿದರು.
ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ಸೇವಾ ಸಮಿತಿಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ ಕಾರ್ಯಕ್ರಮ 22 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ಕ್ಷೇತ್ರ ಪಾಪನಾಶ ಮಂದಿರದಿಂದ ಬೆಲ್ದಾಳೆ ಕನವೆನ್‍ಷನ್ ಹಾಲ್‍ವರೆಗೆ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥಗಳೊಂದಿಗೆ ಶ್ರೀಶೈಲ ಜಗದ್ಗುರುಗಳವರ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯುದ್ದಕ್ಕೂ ಮಂಗಳವಾದ್ಯಗಳು ಮೊಳಗಲಿವೆ. ಅದರಲ್ಲಿ ಡೊಳ್ಳು ಕುಣಿತ, ಕುಂಭ ಮೇಳ, ಲಂಬಾಣಿ ನೃತ್ಯ, ಹಲಗೆ ಮೇಳ ಮತ್ತು ವಿವಿಧ ಭಹನಾ ಮೇಳಗಳು ಶೋಭಾಯಾತ್ರೆಯ ಮೆರಗು ಹೆಚ್ಚಿಸಲಿವೆ ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಶಿವಯ್ಯ ಸ್ವಾಮಿ ಮಾತನಾಡಿ ಸಿದ್ಧಾಂತ ಶಿಖಾಮಣಿ ಅಭಿಯಾನದಡಿ ಸುಮಾರು 46 ಕಡೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಿದ್ಧಾಂತ ಶಿಖಾಮಣಿ ಗ್ರಂಥಗಳನ್ನು ದೆಹಲಿ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ವಿದೇಶಿ ರಾಯಭಾರಿಗಳಿಗೆ ಇಲ್ಲಿಯ ಮಂತ್ರಿಗಳಿಗೆ, ಸಚಿವಾಲಯದ ಮುಖ್ಯಸ್ಥರುಗಳಿಗೆ, ಹಿರಿಯ ಅಧಿಕಾರಿಗಳಿಗೆ, ನ್ಯಾಯಾಧೀಶರಿಗೆ ಅನೇಕ ಪೂಜ್ಯರಿಗೆ 1008 ಗ್ರಂಥಗಳನ್ನು ಸಮರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು. ಸೆ. 22 ರಂದು ನಡೆಯುವ ಭವ್ಯ ಸಮಾರಂಭದಲ್ಲಿ ರಾಜ್ಯದ ನಾನಾ ಕಡೆಗಳಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಸಹಸ್ರಾರು ಭಕ್ತರು ಪಾಲ್ಗೊಂಡು ಈ ಪವಿತ್ರ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು. ಸಮಿತಿಯ ಗೌರವಾಧ್ಯಕ್ಷ ಶಿವಶರಣಪ್ಪ ವಾಲಿ ಮಾತನಾಡಿದರು.
ಸಮಿತಿಯ ಉಪಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಖಜಾಂಚಿ ಕಂಟೆಪ್ಪ ಭಂಗೂರೆ, ಸದಸ್ಯರುಗಳಾದ ಶಿವಕುಮಾರ ಪಾಟೀಲ ತೆಗಂಪೂರ, ಮಹಾಂತೇಶ ಬಿರಾದಾರ, ಮಹೇಶ ಪಾಟೀಲ, ಮಹಾಲಿಂಗ ಸ್ವಾಮಿ ಚಟನಳ್ಳಿ, ಶಿವಕುಮಾರ ಸ್ವಾಮಿ ಬಂಬುಳಗಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.