ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ ವರ್ಗಾವಣೆಗೆ ಬಿ.ಆರ್. ಪಾಟೀಲ್ ಆಗ್ರಹ
ಕಲಬುರಗಿ:ಅ.04: ಮಹಾನಗರ ಪಾಲಿಕೆಯಲ್ಲಿನ (ಅಭಿವೃದ್ಧಿ) ಉಪ ಆಯುಕ್ತ ಹಾಗೂ ಅಧೀಕ್ಷಕ ಅಭಿಯಂತರ ಆರ್.ಪಿ. ಜಾಧವ್ ಅವರು ಪಾಲಿಕೆಯಲ್ಲಿಯೇ ನೌಕರಿ ಸೇರಿ ಇಲ್ಲಿಯವರೆಗೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ನಾಲ್ಕು ಬಡ್ತಿಗಳನ್ನು ಪಡೆದು ಈಗ ನಿವೃತ್ತಿ ಅಂಚಿನಲ್ಲಿದ್ದಾರೆ. ಹಾಗಾಗಿ ಅವರ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ತನಿಖೆ ಮಾಡಬೇಕು ಹಾಗೂ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂಬ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಅವರು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದಿದ್ದು, ಆ ಕುರಿತು ನಾನೇ ಸ್ವತ: ಮುಖ್ಯಮಂತ್ರಿಗಳಿಗೆ ಭೇಟಿ ಮಾಡುವೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಪಿ. ಜಾಧವ್ ಅವರು ಕಳೆದ 2003-2004ರಲ್ಲಿ ಮಹಾನಗರ ಪಾಲಿಕೆಯಲ್ಲಿ ಕಿರಿಯ ಅಭಿಯಂತರರಾಗಿ ಬ್ಯಾಕ್‍ಲಾಗ್‍ನಿಂದ ಹುದ್ದೆಯಲ್ಲಿ ಸೇರ್ಪಡೆ ಆಗಿ ಸೇವೆ ಸಲ್ಲಿಸುತ್ ಬಂದಿದ್ದು, ನಂತರ ಕಿರಿಯ ಸಹಾಯಕ ಅಭಿಯಂತರರ ಹುದ್ದೆಗೆ ಮುಂಬಡ್ತಿ ಹೊಂದಿದರು. ತದನಂತರ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಹಾಗೂ ಕಾರ್ಯಪಾಲಕ ಅಭಿಯಂತರರಾಗಿ ಮುಂಬಡ್ತಿ ಹೊಂದಿ ಸದ್ಯ ಅಧೀಕ್ಷಕ ಅಭಿಯಂತರರಾಗಿ ಮುಂಬಡ್ತಿ ಹೊಂದಿ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಕಾರ್ಯವೈಖರಿಗೆ ಮಹಾಪೌರರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
ಆರ್. ಪಿ. ಜಾಧವ್ ಅವರು ಕಿರಿಯ ಅಭಿಯಂತರರಾಗಿ ಸೇವೆಗೆ ಸೇರಿದ ನಂತರ ಇದೇ ಪಾಲಿಕೆಯಲ್ಲಿ 20 ವರ್ಷಗಳಲ್ಲಿ ನಾಲ್ಕು ಬಾರಿ ಮುಂಬಡ್ತಿ ಪಡೆದು ಸೇವೆಯಲ್ಲಿದ್ದಾರೆ. ಅವರು ಈಗ ಇಲ್ಲಿಯೇ ನಿವೃತ್ತಿ ಹೊಂದುವ ಹಂತಕ್ಕೆ ಬಂದಿದ್ದಾರೆ. ಅವರಿಗೆ ಯಾವ ಕಾನೂನು ರೀತ್ಯಾ ಹಾಗೂ ಯಾವ ಮಾನದಂಡಗಳ ಅನ್ವಯ ಬಡ್ತಿ ಮೇಲೆ ಪಡೆದಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅವರ ಸೇವಾವಧಿಯಲ್ಲಿ ಯಾವುದೇ ಹೇಳಿಕೊಳ್ಳುವಂತಹ ಕೆಲಸ ಕೂಡ ಆಗಿಲ್ಲ. ಅವರು ಇಲ್ಲಿಯವರೆಗೆ ಪಾಲಿಕೆಗೆ ನಿಷ್ಠೆಯಿಂದ ನಡೆದುಕೊಂಡಿಲ್ಲ. ಅಲ್ಲದೇ ಜವಾಬ್ದಾರಿಯಿಂದ ನಡೆದುಕೊಂಡಿದ್ದೂ ಕೂಡ ಇಲ್ಲ. ಕಳೆದ 20 ವರ್ಷಗಳಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ನೆನಪಿಟ್ಟುಕೊಳ್ಳುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಅವರು ದೂರಿದರು.
ಮಾಡಿದ ಕೆಲಸಗಳು ಕಳಪೆಯಾಗಿವೆ. ಅವರು ಕಿರಿಯ ಅಭಿಯಂತರರು ಆಗಿದ್ದ ಸಂದರ್ಭದಲ್ಲಿ ಎಷ್ಟು ಕಾಮಗಾರಿಗಳಿಗೆ ಬಿಲ್ ರಿಕಾರ್ಡ್ ಮಾಡಿದ್ದಾರೆ. ಸಹಾಯ ಅಭಿಯಂತರರಾಗಿದ್ದಾಗ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದಾಗ, ಕಾರ್ಯಪಾಲಕ ಅಭಿಯಂತರರಾಗಿದ್ದಾಗ, ಮತ್ತು ಅಧೀಕ್ಷಕ ಅಭಿಯಂತರಾಗಿದ್ದಾಗ ಬಿಲ್ ರಿಕಾರ್ಡ್ ಮಾಡಿರುವ ಕುರಿತು ಹಾಗೂ ಅವರು ಮಾಡಿರುವ ಕೆಲಸಗಳಲ್ಲಿ ಬಾಕಿ ಉಳಿದಿರುವ ಕುರಿತು, ಎಷ್ಟು ಕೆಲಸಗಳು ಹಾಳಾಗಿವೆ ಎಂಬುದರ ಕುರಿತು ತನಿಖೆ ಮಾಡಿಸಬೇಕು ಎಂದು ಮಹಾಪೌರರು ಒತ್ತಾಯಿಸಿದ್ದು, ಆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಬಿ.ಆರ್. ಪಾಟೀಲ್ ಅವರು ಹೇಳಿದರು.
ಕಾರಣ ಉಪ ಆಯುಕ್ತ ಆರ್.ಪಿ. ಜಾಧವ್ ಅವರನ್ನು ಕೂಡಲೇ ಪಾಲಿಕೆಯಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಬೇರೆಡೆ ವರ್ಗಾವಣೆ ಮಾಡಬೇಕು. ಅವರ ಅವಧಿಯಲ್ಲಿನ ಕಾಮಗಾರಿಗಳ ಕುರಿತು ಸಂಪೂರ್ಣ ವಿವರ ಪಡೆದು ಆಗಿರುವ ನಷ್ಟಕ್ಕೆ ಅವರ ವೇತನದಲ್ಲಿ ವಸೂಲಿ ಮಾಡಬೇಕು ಎಂದು ಮಹಾಪೌರರು ಮನವಿ ಮಾಡಿದ್ದು, ಶೀಘ್ರ ಮುಖ್ಯಮಂತ್ರಿಗಳೊಂದಿಗೆ ಬೇಡಿಕೆ ಚರ್ಚಿಸುವೆ ಎಂದು ಅವರು ತಿಳಿಸಿದರು.