ಬಡವರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಲೋಕಾಯುಕ್ತ ಎಸ್‍ಪಿ ಎಚ್ಚರಿಕೆ
ಕಲಬುರಗಿ,ಅ.4-ಬಡವರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ್ ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಖಡಕ್ಕಾದ ಎಚ್ಚರಿಕೆ ನೀಡಿದರು.
ಮಹಾನಗರ ಪಾಲಿಕೆಯ ವಲಯ ಕಚೇರಿ 1, 2 ಮತ್ತು 3ಕ್ಕೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಒಂದೇ ಕೆಲಸಕ್ಕೆ ಹಲವಾರು ಬಾರಿ ಅಲೆದಾಡಿಸುತ್ತಾರೆ. ಒಂದು ತಿಂಗಳು, ಎರಡು ತಿಂಗಳುಗಳ ಕಾಲ ಅರ್ಜಿಗಳನ್ನು ಹಿಡಿದುಕೊಂಡು ಅಲೆದಾಡಿಸುತ್ತಾರೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು. ಬಡವರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಹಾನಗರ ಪಾಲಿಕೆ ಕಚೇರಿ ಒಳಗಡೆ ಪಾನ್ ಮಸಾಲ್ ತಿಂದು ಉಗುಳಿದ್ದು, ಕಚೇರಿ ಕಡತಗಳು ರಾಶಿರಾಶಿಯಾಗಿ ಬಿದ್ದಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತರು, ಮಹಾನಗರ ಪಾಲಿಕೆ ಸಿಬ್ಬಂದಿಗಳು ಕೆಲಸದ ಅವಧಿಯಲ್ಲಿ ಸ್ಥಳದಲ್ಲಿ ಹಾಜರಿರದೇ ಇರುವುದನ್ನು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಕಚೇರಿ, ಕಚೇರಿಯೊಳಗಿರುವ ಶೌಚಾಲಯ ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ಸೂಚಿಸಿದರಲ್ಲದೆ, ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು ಎಂದು ಸೂಚಿಸಿದರು.
ಡಿವೈಎಸ್‍ಪಿ ಗೀತಾ ಬೇನಾಳ, ಇನ್ಸಪೆಕ್ಟರ್‍ಗಳಾದ ಅರುಣಕುಮಾರ, ಅಕ್ಕಮಹಾದೇವಿ, ರಾಜಶೇಖರ್ ಹಳಿಗೋಧಿ, ಸಿಬ್ಬಂದಿಗಳಾದ ಪ್ರದೀಪ್, ಸಂತೋಷಮ್ಮ, ಬಸವರಾಜ, ಮಲ್ಲನಾಥ, ಪೌಡಪ್ಪ, ಪ್ರಮೋದ್ ಇದ್ದರು.