ಬೆಳಗಲ್ಲು ವೀರಣ್ಣ ಹೆಸರಲ್ಲಿ ಕಲಾಕ್ಷೇತ್ರ ನಿರ್ಮಾಣವಾಗಲಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ,, ಏ.3: ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ಅನನ್ಯ ಸೇವೆ, ಸಾಧನೆ ಮಾಡಿದೆ  ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ನಗರದಲ್ಲಿ ಕಲಾಕ್ಷೇತ್ರ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿಬ  ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಒತ್ತಾಯಿಸಿದ್ದಾರೆ.
ಅವರು ನಿನ್ನೆ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಗೂ ನಗರದ  ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಇವರ ಸಹಯೋಗದಿಂದ ಸ್ನೇಹ ಸಂಪುಟ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ  ಬೆಳಗಲ್ಲು‌ ವೀರಣ್ಣನವರ ಮೊದಲ‌ ವರ್ಷದ ಪುಣ್ಯ ಸ್ಮರಣೆಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿ, ಪ್ರತಿಭೆ,  ಸರಳ, ಸಜ್ಜನಿಕೆ, ವಿನಯವಂತಿಕೆಯಲ್ಲಿ ವರನಟ ಡಾ. ರಾಜಕುಮಾರ್ ನಂತಿದ್ದರೆಂದರು.
ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತನಾಡಿದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಅವರು,  ನಾಡೋಜ ಬೆಳಗಲ್ಲು ವೀರಣ್ಣ ಕಲಾಕ್ಷೇತ್ರ ನಿರ್ಮಾಣದ ಜತೆಗೆ ನಗರದ ಪ್ರಮುಖ ರಸ್ತೆಗೆ ಇವರ ಹೆಸರನ್ನು ನಾಮಕರಣ ಮಾಡಬೇಕೆಂದರು.
ಶೀಘ್ರದಲ್ಲೇ ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರಿಗೆ ತಮ್ಮ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಪತ್ರ ನೀಡಲಾಗುವುದು. ಚುನಾವಣೆ ಬಳಿಕ ಸಿಎಂ., ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ನಗರ ಶಾಸಕರನ್ನು ಭೇಟಿ ಮಾಡಿ ಕಲಾಕ್ಷೇತ್ರ ನಿರ್ಮಾಣಕ್ಕೂ ಒತ್ತಾಯಿಸಲಾಗುವುದು ಎಂದರು.
ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು, ಅಲೆಮಾರಿ, ಬುಡಕಟ್ಟು ಕಲೆಗಳಲ್ಲಿ ಅಜ್ಞಾತವಾಗಿದ್ದ ನಾಡಿನ ಜಾನಪದ ತೊಗಲುಗೊಂಬೆ ಕಲೆಯ ಮಹತ್ವವನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ಕಲಾವಿದರು  ವೀರಣ್ಣನವರು ಎಂದು ಬಣ್ಣಿಸಿದರು.
ಉಪನ್ಯಾಸಕ  ಎಎಂಪಿ ವೀರೇಶ ಸ್ವಾಮಿ ಅವರು ವೀರಣ್ಣ‌ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಸ್ವರಚಿತ ಕವನ ವಾಚಿಸುವ ಮೂಲಕ ಗಮನ ಸೆಳೆದರು.
ಸಂಘಟಕ ಬಿಸಲಹಳ್ಳಿ ಬಸವರಾಜ್  ವೀರಣ್ಣ ಅವರ ಒಡನಾಟ ಸ್ಮರಿಸಿ ಭಾವುಕರಾದರು.
ರಂಗಕಲಾವಿದ ಪರಶುರಾಮ್ ಹಂದ್ಯಾಳ್, ಮಲ್ಲಿಕಾರ್ಜುನ ಬೆಳಗಲ್ಲು  ಬೆಳಗಲ್ಲು ಹನುಮಂತು,  ಲಕ್ಷ್ಮಿ ‌ಬೆಳಗಲ್ಲು, ಆಲಾಪ್ ಸಂಗೀತ ಕಲಾ ಬಳಗದ ರಮಣಪ್ಪ ಭಜಂತ್ರಿ, ಹಿರಿಯ ಛಾಯಾಗ್ರಾಹಕ ತಿಪ್ಪೇಸ್ವಾಮಿ, ಅಹಿಂದ ಮಂಜುನಾಥ್, ಟಿ. ಸುನೀಲ್ ಕುಮಾರ್, ಕಲಾಟ್ರಸ್ಟ್ ನ ಸದಸ್ಯೆ ಸಿ.ತುಳಸಿ ಮತ್ತಿತರ ಇದ್ದರು.
ಗಗನ ಕುಮಾರ್ ಪ್ರಾರ್ಥಿಸಿದರು. ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷ ಸುಬ್ಬು ಶಿಳ್ಳೇಕ್ಯಾತರ ವಂದಿಸಿದರು.